ಕಾಂಗ್ರೆಸ್ ನಿಂದ ರಸ್ತೆ ತಡೆ, ಜನಜೀವನ ಅಸ್ತವ್ಯಸ್ತ

ಮೈಸೂರು ರಸ್ತೆಯಲ್ಲಿ ರಾಜರಾಜೇಶ್ವರಿ ಗೇಟ್ ಬಳಿ, ತುಮಕೂರು ರಸ್ತೆಯಲ್ಲಿ ಗೊರಗುಂಟೆ ಪಾಳ್ಯದ ಬಳಿ, ಬಳ್ಳಾರಿ ರಸ್ತೆಯಲ್ಲಿ ಕೋಗಿಲು ಕ್ರಾಸ್ ಬಳಿ ಮತ್ತು ಹೊಸೂರು ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಕಾಂಗ್ರೆಸ್ ನ ವಿವಿಧ ನಾಯಕುಗಳ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆ ತಡೆ ಮಾಡಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸಿದ್ದರಾಮಯ್ಯ, ಕೃಷ್ಣ ಭೈರೇಗೌಡ, ಮೋಟಮ್ಮ, ಜಾಫರ್ ಶರೀಫ್, ಜಿ ಪರಮೇಶ್ವರ್ ಮುಂತಾದ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಓದಿ : ಕರ್ನಾಟಕ ಪ್ರೀಮಿಯರ್ ಲೀಗ್ - ಯಡಿಯೂರಪ್ಪ vs ಭಾರದ್ವಾಜ್
ಬಿಜೆಪಿ ಸಂವಿಧಾನಕ್ಕೆ ಅವಮಾನ ಮಾಡಿದೆ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ, ಅದನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ವಿಶ್ರಮಿಸುವುದಿಲ್ಲ ಎಂದು ಭಾಷಣ ಮಾಡಿದ ಸಿದ್ದರಾಮಯ್ಯ ಮತ್ತು ಸಂಗಡಿಗರನ್ನು ಕೋಗಿಲು ಕ್ರಾಸ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ನಾಯಕ ಜಾಫರ್ ಶರೀಫ್ ಅವರನ್ನು ಕೂಡ ಬಂಧಿಸಲಾಗಿದೆ. ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಅನ್ಯಾಯವಾಗಿ ಪೊಲೀಸರು ತಮ್ಮನ್ನು ಬಂಧಿಸಿದ್ದಾರೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿ ನಗರ ಹೆಬ್ಬಾಗಿಲು ಬಳಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮತ್ತು ವಿರೋಧ ಪಕ್ಷದ ಮಾಜಿ ನಾಯಕಿ ಮೋಟಮ್ಮ ಅವರು ಪ್ರತಿಭಟನೆ ನಡೆಸಿ ಬಿಜೆಪಿಯನ್ನು ತೊಲಗಿಸುವುದೇ ಕಾಂಗ್ರೆಸ್ ಏಕೈಕ ಗುರಿ ಎಂದು ನೆರೆದಿದ್ದ ನೂರಾರು ಕಾರ್ಯಕರ್ತರು ಮತ್ತು ಟ್ರಾಫಿಕ್ಕಿನಲ್ಲಿ ಸಿಲುಕಿಕೊಂಡಿದ್ದು ಸಹಸ್ರಾರು ವಾಹನ ಚಾಲಕನ್ನು ಉದ್ದೇಶಿಸಿ ಮಾತನಾಡಿದರು. ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ರಾಜಭವನ ರಸ್ತೆಯಲ್ಲಿ ಕೂಡ ಬಿಜೆಪಿ ನಾಯಕುಗಳ ಪ್ರತಿಕೃತಿಗೆ ಬೆಂಕಿ ಹಚ್ಚಿ, ಪೊರಕೆಯಿಂದ ಹೊಡೆದು ಕಾಂಗ್ರೆಸ್ ಮಹಿಳಾಮಣಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದರಿಂದ ಕಾಂಗ್ರೆಸ್ ಸಾಧಿಸಿದ್ದಾದರೂ ಏನು, ಇವರು ಮಾಡುವ ಪ್ರತಿಭಟನೆ, ಇವರ ಕೂಗು ನವದೆಹಲಿಯನ್ನು ತಲುಪುವುದೆ? ಬಿಜೆಪಿ ಕೂಡ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಪ್ರತಿಭಟಿಸುತ್ತಿದೆ. ಇದರಿಂದ ಸಾಧಿಸಿದ್ದಾದರೂ ಏನು? ಜನಸಾಮಾನ್ಯರಿಗೆ ತೊಂದರೆ ಕೊಡುವುದು ಬಿಟ್ಟರೆ ಈ ರಾಜಕಾರಣಿಗಳ ಸಾಧನೆ ಶೂನ್ಯ ಎಂದು ಟ್ವಿಟ್ಟರಿನಲ್ಲಿ ಕನ್ನಡಿಗರು ರಾಜಕಾರಣಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರು ಇರುವ ಮರ್ಯಾದೆಯನ್ನೂ ಕಳೆದುಕೊಂಡಿದ್ದಾರೆ. ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ದೇವರಾಣೆ ಮತ ಹಾಕುವುದಿಲ್ಲ ಎಂದು ಟ್ವಿಟ್ಟರಿನಲ್ಲಿ ಮೆಸೇಜುಗಳನ್ನು ಹಾಕುತ್ತಿದ್ದಾರೆ.











Click it and Unblock the Notifications