ಸಿಡಬ್ಲ್ಯೂಜಿ ಹಗರಣ : ಸಿಬಿಐನಿಂದ ಕಲ್ಮಾಡಿ ಬಂಧನ

ಕಲ್ಮಾಡಿ ಅವರ ಬಂಧನವಾದ ಕೂಡಲೆ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಕಾಂಗ್ರೆಸ್ ಅಮಾನತು ಮಾಡಿದೆ. ಕಾಮನ್ ವೆಲ್ತ್ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಕಳೆದ ವರ್ಷ ನವೆಂಬರ್ ನಲ್ಲಿ ಅವರನ್ನು ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಕಿತ್ತುಹಾಕಲಾಗಿತ್ತು. ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಭ್ರಷ್ಟಾಚಾರ ಮತ್ತು ಅತ್ಯಂತ ಕಳಪೆ ಕಾಮಗಾರಿಯಿಂದಾಗಿ ಕಾಮನ್ ವೆಲ್ತ್ ಕ್ರೀಡಾಕೂಟ ಭಾರತದ ಪ್ರತಿಷ್ಠೆಗೆ ಮಸಿ ಬಳಿದಿತ್ತು. ಕ್ರೀಡಾಕೂಟದ ಸಲಕರಣೆಗಳಿಗಾಗಿ ಮತ್ತು ಇನ್ನಿತರ ಸೇವೆಗಳಿಗಾಗಿ ಕೂಟದ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದ ಕಲ್ಮಾಡಿ, ಅತ್ಯಂತ ದುಬಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಟೈಮಿಂಗ್-ಸ್ಕೋರಿಂಗ್-ರಿಸಲ್ಟ್ಸ್ ಸಲಕರಣೆಗಾಗಿ ಸ್ವಿಸ್ ಸಂಸ್ಥೆಯೊಂದಿಗೆ ಕಲ್ಮಾಡಿ ಒಳಒಪ್ಪಂದ ಮಾಡಿಕೊಂಡಿದ್ದರೆಂಬುದು ಆರೋಪ.
ನಾಲ್ಕನೇ ಬಾರಿ ಕಲ್ಮಾಡಿಯನ್ನು ವಿಚಾರಣೆಗೆ ಗುರಿಪಡಿಸಿದ ಸಿಬಿಐ, ಎಲ್ಲ ದಾಖಲೆಗಳನ್ನು ಕಲೆಹಾಕಿಕೊಂಡು, ಕಲ್ಮಾಡಿಯಿಂದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಖಚಿತ ಸಾಕ್ಷ್ಯಗಳು ದೊರೆತ ಕೂಡಲೆ ಅವರನ್ನು ಬಂಧನಕ್ಕೆ ಒಳಪಡಿಸಿದೆ. ಕಲ್ಮಾಡಿ ಅವರೊಂದಿಗೆ ಕೈ ಜೋಡಿಸಿದ್ದ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಲಲಿತ್ ಭಾನೋಟ್ ಮತ್ತು ಪ್ರಧಾನ ನಿರ್ದೇಶಕರಾಗಿದ್ದ ವಿಕೆ ವರ್ಮಾ ಅವರು ಸೇರಿದಂತೆ ಏಳು ಜನ ಈಗಾಗಲೆ ಬಂಧಿತರಾಗಿದ್ದು, ಜೈಲಿನಲ್ಲಿ ರಾಗಿ ಬೀಸುತ್ತಿದ್ದಾರೆ.
2009ರಲ್ಲಿ ಲಂಡನ್ ನಿಂದ ಕ್ವೀನ್ಸ್ ಬೇಟನ್ ರಿಲೆ ಹೊರಟ ಹಂತದಿಂದಲೇ ಭ್ರಷ್ಟಾಚಾರದ ಕಿಡಿಯನ್ನು ಕಲ್ಮಾಡಿ ಹೊತ್ತಿಸಿದ್ದರು. ಲಂಡನ್ ನಲ್ಲಿರುವ ಎಎಮ್ ಫಿಲ್ಮಂಸ್ ಎಂಬ ಸಂಸ್ಥೆಯೊಂದಿಗೆ ಯಾವುದೇ ಅಧಿಕೃತ ಒಪ್ಪಂದ ಮಾಡಿಕೊಂಡರದೇ ಇದ್ದರೂ ದೆಹಲಿಯಲ್ಲಿನ ಸಮಾರಂಭಕ್ಕಾಗಿ ಬೃಹತ್ ಟಿವಿ ಸ್ಕ್ರೀನ್, ಪೋರ್ಟೆಬಲ್ ಟಾಯ್ಲೆಟ್, ಟ್ಯಾಕ್ಸಿ ಸೇವೆಯನ್ನು ಪಡೆದು ಭಾರೀ ಮೊತ್ತವನ್ನು ಸಂಸ್ಥೆಯ ಮಾಲಿಕ ಆಶಿಶ್ ಪಟೇಲ್ ಎಂಬುವವರಿಗೆ ವರ್ಗಾಯಿಸಿದ್ದರು. ಸಮಯವಿಲ್ಲದ್ದರಿಂದ ಒಪ್ಪಂದ ಮಾಡಿಕೊಳ್ಳಲು ಆಗಲಿಲ್ಲ ಎಂಬ ಕುಂಟು ನೆವ ಹೇಳಿದ್ದರು. ಈ ಹಗರಣದ ವಿಚಾರಣೆಗಾಗಿ ಸಿಬಿಐ ತಂಡ ಲಂಡನ್ನಿಗೂ ಹೋಗಿತ್ತು.












Click it and Unblock the Notifications