ರಾಜ್ಯಾದ್ಯಂತ ಭಾರೀ ಮಳೆ : ಸಿಡಿಲಿಗೆ 13 ಸಾವು

ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಚಂದ್ರಶೇಖರ, ರವಿ ಎಂಬಿಬ್ಬರು ಸೇರಿದಂತೆ ಮೂವರು ಸಿಡಿಲು ಬಡಿದು ಮೃತರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿಯೂ ಭಾರೀ ಮಳೆ ಸುರಿದಿದ್ದು, ಕೊಳ್ಳೆಗಾಲ ತಾಲೂಕಿನ ಶಾಗ್ಯಂ ಗ್ರಾಮದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಗಳಾದ ತಮ್ಮಡಿ ಸಿದ್ದಯ್ಯ (53) ಮತ್ತು ನಾಗರಾಜು (23) ಎಂಬುವವರು ವರುಣನ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ಮಳೆಯಿಂದ ತಪ್ಪಿಸಿಕೊಳ್ಳಲು ಕೆರೆಯ ಏರಿಯ ಮೇಲಿದ್ದ ಬೇವಿನ ಮರದ ಕೆಳಗೆ ಆಶ್ರಯ ಪಡೆದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತರಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಗಾಳೂರು ಎಂಬ ಗ್ರಾಮದಲ್ಲಿ ಶ್ರೀಧರ (16) ಎಂಬ ಬಾಲಕ ಅಕಾಲ ಮರಣಕ್ಕೀಡಾಗಿದ್ದಾನೆ. ಹಾಗೆಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಓರ್ವ ಸಿಡಿಲು ಬಡಿದು ಇಹಲೋಕ ತ್ಯಜಿಸಿದ್ದಾನೆ. ಚಳ್ಳಕೆರೆಯಲ್ಲಿ ಕೂಡ ಸಿಡಿಲು ಓರ್ವನನ್ನು ಬಲಿ ತೆಗೆದುಕೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹುಲಿಗೆಮ್ಮ ಎಂಬ ಮಹಿಳೆ ಸತ್ತಿದ್ದಾರೆ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ, ಹಾವೇರಿ, ಮೈಸೂರಿನಲ್ಲಿಯೂ ಸಂಜೆಯ ವೇಳೆ ಗುಡುಗು ಮತ್ತು ಸಿಡಿಲು ಸಹಿತ ಎಡೆಬಿಡದಂತೆ ಮಳೆ ಸುರಿದಿದೆ. ಹಾಸನದಲ್ಲಿ 10 ಕುರಿಗಳು ಅಸುನೀಗಿದ್ದರೆ, ಕೊಪ್ಪಳ ಜಿಲ್ಲೆಯ ಮಾವಿನಇಟಗಿಯಲ್ಲಿ ಒಟ್ಟು 44 ಕುರಿಗಳು ಮಳೆಯ ಹೊಡೆತದಿಂದಾಗಿ ಪ್ರಾಣ ಕಳೆದುಕೊಂಡಿವೆ. ಅನಿರೀಕ್ಷಿತವಾಗಿ ಸುರಿದ ಮಳೆಗೆ ಅನೇಕರು ಗಾಯಗೊಂಡಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲಿಸಿರುವ ಗುಲಬರ್ಗಾ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೂ ರಾಜ್ಯಾದ್ಯಂತ ಈ ಪರಿಯ ಮಳೆ ಸುರಿದಿರಲಿಲ್ಲ. ಬಿಸಿಲ ಝಳ ತಾಳಲಾರದೆ ಬೆವರಿನ ಝಳಕ ಮಾಡುತ್ತಿದ್ದ ಜನತೆಗೆ ಈ ಅನಿರೀಕ್ಷಿತ ಮಳೆ ಸಂಸತದ ಹೊಳೆ ಹಸಿರಿದ್ದರೆ, ಪ್ರಾಣ ಕಳೆದುಕೊಂಡು, ಆಸ್ತಿಪಾಸ್ತಿ ಹಾನಿಗೆ ಒಳಗಾದವರ ಕುಟುಂಬದವರನ್ನು ದುಃಖದ ಮಡುವಿಗೆ ತಳ್ಳಿದೆ.
ಬೆಂಗಳೂರಿನಲ್ಲಿ ಕೂಡ ಆಗಸ ಕಪ್ಪು ಮೋಡಗಳಿಂದ ಆಚ್ಛಾದಿತವಾಗಿದ್ದು ಯಾವುದೇ ಗಳಿಗೆಯಲ್ಲಿ ಮಳೆ ಸುರಿಯುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಇದೇ ಸ್ಥಿತಿ ಇನ್ನೂ ಎರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದ್ದು ಜನ ಕೊಡೆಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬಾರದು.











Click it and Unblock the Notifications