ಭಗವಾನ್ ಸಾಯಿಬಾಬಾ ಉತ್ತರಾಧಿಕಾರಿ ಯಾರು?

ಈ ಮಧ್ಯೆ ಬಾಬಾ ಆರೋಗ್ಯ ಸುಧಾರಿಸಲಿ ಎಂದು ಭಕ್ತರು ಎಲ್ಲೆಡೆ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಶ್ರೀ ಸತ್ಯ ಸಾಯಿಬಾಬಾಗೆ ಚಿಕಿತ್ಸೆ ನೀಡಲು ಅಮೆರಿಕದಿಂದ ಇಬ್ಬರು ತಜ್ಞ ವೈದ್ಯರು ಮಂಗಳವಾರ ಪುಟ್ಟಪರ್ತಿಗೆ ಆಗಮಿಸಿದ್ದಾರೆ. ಈ ವೈದ್ಯರು ಸ್ಥಳೀಯ ವೈದ್ಯರಿಗೆ ನೆರವು ನೀಡುತ್ತಿದ್ದಾರೆ.
ಇಂತಹ ವಿಷಮಸ್ಥಿತಿಯಲ್ಲಿ ಸಾಯಿಬಾಬಾ ಅವರ ಉತ್ತರಾಧಿಕಾರಿ ಯಾರು? ಪ್ರಶಾಂತಿ ನಿಲಯದ ಆಗುಹೋಗುಗಳನ್ನು ನೋಡಿಕೊಳ್ಳುವವರಾರು? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ. ಆದರೆ ಸಾಯಿಬಾಬಾ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ. ಅರ್ಥಾತ್ ಅವರೇ ಪುನರ್ಜನ್ಮವೆತ್ತಿ ಬಾಬಾ ಉತ್ತರಾಧಿಕಾರಿಯಾಗಬಹುದು ಎನ್ನಲಾಗಿದೆ. ನಾಲ್ಕು ವರ್ಷಗಳ ಹಿಂದೆ ಸತ್ಯ ಸಾಯಿ ಬಾಬಾ ಅವರು ಇದೇ ರೀತಿ ತೀವ್ರವಾಗಿ ಅಸ್ವಸ್ಥರಾದಾಗ ಈ ಪ್ರಶ್ನೆಗೆ ಚಾಲನೆ ಸಿಕ್ಕಿತ್ತು. ಪ್ರಶ್ನೆಗೆ ಈಗ ಮತ್ತೆ ಜೀವ ಬಂದಿದೆ.
1963ರ ಜುಲೈ 6 ರಂದು ಗುರುಪೂರ್ಣಿಮೆಯ ಸಂದರ್ಭದಲ್ಲಿ ಸಾಯಿಬಾಬಾ ಅವರು ತಮ್ಮ ಪವಾಡಗಳು, ಧಾರ್ಮಿಕ ಸಾಮರ್ಥ್ಯದ ಹಿಂದಿನ ಶಕ್ತಿ ಯಾರು, ಏನು ಎಂಬುದನ್ನು ಸೂಕ್ಷ್ಮವಾಗಿ ಬಹಿರಂಗಪಡಿಸಿದ್ದರು. ಶಿವ ಶಕ್ತಿಗೆ ಅನುಗುಣವಾಗಿ ಸಾಯಿ ಅವತಾರವೆತ್ತಿರುವುದು ಎಂದಿದ್ದರು. ಶಿವ, ಶಿರಡಿ ಸಾಯಿಬಾಬಾ ಆಗಿದ್ದರೆ ಶಿವ ಶಕ್ತಿಯು ಸ್ವತಃ ತಾವೇ ಅಂದರೆ ಶ್ರೀ ಸತ್ಯ ಸಾಯಿಬಾಬಾ ಆಗಿದ್ದು, ಮುಂದಿನ ಅವತಾರದಲ್ಲಿ ಮಂಡ್ಯ ಜಿಲ್ಲೆಯಲ್ಲಿ 'ಪ್ರೇಮ ಸಾಯಿ' ಸ್ವರೂಪದಲ್ಲಿದೆ ಜನ್ಮ ತಾಳುವುದಾಗಿ ಅಂದೇ ಘೋಷಿಸಿದ್ದರು. ಅಂದರೆ ತಾವೇ ಮರುಜನ್ಮ ಪಡೆಯುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಶ್ರೀ ಸತ್ಯಸಾಯಿ ಟ್ರಸ್ಟ್ ಸಹ ಸಾಯಿಬಾಬಾ ಅವರ ಉತ್ತರಾಧಿಕಾರಿಯನ್ನು ನೇಮಿಸುವ ವಿಚಾರವನ್ನು ಕೈಬಿಟ್ಟಿತ್ತು.
ತಮ್ಮ ಬಾಲ್ಯದಲ್ಲಿಯೇ ಸಾಯಿಬಾಬಾ ಅವರು ಶಿರಡಿ ಸಾಯಿಬಾಬಾ ಬಗ್ಗೆ ಹಾಡುಗಳನ್ನು ರಚಿಸುತ್ತಿದ್ದರು. 1918ರಲ್ಲಿ ಶಿರಡಿ ಸಾಯಿಬಾಬಾ ಸಾಯುವುದಕ್ಕೂ ಮುನ್ನ ಎಂಟು ವರ್ಷಗಳಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಮರುಜನ್ಮ ತಾಳುವುದಾಗಿ ಪ್ರಕಟಿಸಿದ್ದರು. 1926ರಲ್ಲಿ ಜನ್ಮವೆತ್ತ ಸತ್ಯ ಸಾಯಿಬಾಬಾ ಕಾಲಾಂತರದಲ್ಲಿ ತಾವೇ ಶಿರಡಿ ಬಾಬಾ ಅವತಾರರೂಪಿ ಎಂದು ಹೇಳಿದ್ದರು. ಸಾಯಿಬಾಬಾ ಕುಟುಂಬದವರ ಪೈಕಿ ಈಗ ಉಳಿದಿರುವವರೆಂದರೆ ಜೆ. ರತ್ನಾಕರ್ ಮಾತ್ರ. ಅವರು ಸಾಯಿಬಾಬಾ ಅವರ ತಮ್ಮ ಜಾನಕಿರಾಮ್ ಅವರ ಪುತ್ರ. ಸರ್ವಶಕ್ತ ಸಾಯಿ ಟ್ರಸ್ಟ್ ನಲ್ಲಿ ಅವರು ಸ್ಥಾನ ಪಡೆದಿದ್ದಾರಾದರೂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಅಸ್ವಸ್ಥರಾಗಿದ್ದಾರೆ.












Click it and Unblock the Notifications