'ಲೋಕ ಪಾಲಕ' ಅಣ್ಣಾ ಹಜಾರೆ ಉಪವಾಸ ಆರಂಭ

ಭ್ರಷ್ಟಾಚಾರ ವಿರೋಧಿ ಲೋಕ್ ಪಾಲ್ (ಒಂಬುಡ್ಸ್ ಮನ್ ) ಮಸೂದೆ ತಿದ್ದುಪಡಿಗೆ ಆಗ್ರಹಿಸಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜಂತರ್ ಮಂತರ್ ನಲ್ಲಿ ಆಜೀವ ಉಪವಾಸ ಹೋರಾಟ ಕೈಗೊಂಡಿದ್ದಾರೆ. ಅದಕ್ಕೂ ಮುನ್ನ, ಪ್ರಸ್ತಾವಿತ ನಿರಶನನ್ನು ಕೈಬಿಡುವಂತೆ ಅಣ್ಣಾ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ರಾತ್ರಿ ವಿನಂತಿಸಿದ್ದರು. ಕಳೆದೊಂದು ತಿಂಗಳಿಂದ ಲೋಕಪಾಲ್ ಬೇಡಿಕೆಯತ್ತ ಪ್ರಧಾನಿ ಗಮನ ಸೆಳೆಯಲು ಅವರು ನಡೆಸಿದ ಅನೇಕ ಪ್ರಯತ್ನಗಳು ವಿಫಲಗೊಂಡಿದ್ದವು ಎಂಬುದು ಗಮನಾರ್ಹ.
ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ, 73 ವರ್ಷದ ಅಣ್ಣಾ ತಮ್ಮ ಬೆಂಬಲಿಗರೊಂದಿಗೆ ಬೆಳಗ್ಗೆ ರಾಜ್ ಘಾಟ್ ಗೆ ಭೇಟಿ, ರಾಷ್ಟ್ರಪಿತ ಮಾಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಮಾಹಿತಿ ಹಕ್ಕು ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಸೇರಿದಂತೆ ನೂರಾರು ಮಂದಿ ಅಣ್ಣಾ ಅವರ ಜತೆಗೂಡಿದ್ದಾರೆ.
ಹಜಾರೆ ಸೇರಿದಂತೆ ನಿರಶನದಾರರು ಲೋಕ್ ಪಾಲ್ ಮಸೂದೆಗೆ ಪರ್ಯಾಯವಾಗಿ ಜನ್ ಲೋಕ್ ಪಾಲ್ ಮಸೂದೆ ಅಳವಡಿಕೆಗೆ ಒತ್ತಾಯಿಸುತ್ತಿದ್ದಾರೆ. ಜನ್ ಲೋಕ್ ಪಾಲ್ ಮಸೂದೆಯನುಸಾರ ಸಾರ್ವಜನಿಕ ಜೀವನದಲ್ಲಿ ತುಂಬಿತುಳುಕುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯಗಳಲ್ಲಿ ಲೋಕ್ ಪಾಲ್ ಮತ್ತು ಲೋಕಾಯುಕ್ತ ವತಿಯಿಂದ ಸ್ವತಂತ್ರ ಒಂಬುಡ್ಸ್ ಮನ್ ರಚನೆಗೆ ಅವಕಾಶ ಕಲ್ಪಿಸಲಿದೆ. ಪ್ರಧಾನ ಮಂತ್ರಿ ಸೇರಿದಂತೆ ಕೇಂದ್ರ ಸಚಿವರ ವಿರುದ್ಧವೂ ಭ್ರಷ್ಟಾಚಾರ ವಿರೋಧಿ ತನಿಖೆ ಕೈಗೊಳ್ಳಬಹುದಾಗಿದೆ.
ರಾಜ್ಯಗಳಲ್ಲಿ ಲೋಕ್ ಪಾಲ್ ಅಥವಾ ಲೋಕಾಯುಕ್ತ ಸ್ವತಂತ್ರ ಸಂಸ್ಥೆಗಳು ಕೈಗೊಳ್ಳುವ ತನಿಖೆಗಳು ಒಂದು ವರ್ಷದಲ್ಲಿ ಪೂರ್ಣಗೊಳ್ಳಬೇಕು. ತಪ್ಪಿತಸ್ಥರಿಗೆ ಕನಿಷ್ಠ ಐದು ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವಂತಿರಬೇಕು ಎಂಬುದು ಅಣ್ಣಾ ಅವರ ಬೇಡಿಕೆಯಾಗಿದೆ. ಆದರೆ ಸರಕಾರ 6 ತಿಂಗಳಿಂದ 7 ವರ್ಷದ ಶಿಕ್ಷೆಗೆ ಮಾತ್ರ ಒಲವು ತೋರಿದೆ.












Click it and Unblock the Notifications