ವಿಶ್ವಕಪ್ ಸರಣಿ ಶ್ರೇಷ್ಠ ಯುವಿಯ ವಿಶೇಷ ವ್ಯಕ್ತಿ ಯಾರು?
ಮುಂಬೈ, ಏ.3: ವಿಶ್ವಕಪ್ 2011ರಲ್ಲಿ ಅದ್ಭುತ ಆಲ್ ರೌಂಡರ್ ಆಟದ ಮೂಲಕ ಭಾರತದ ಗೆಲುವಿನ ಅಭಿಯಾನಕ್ಕೆ ಯುವರಾಜ್ ಬೆನ್ನೆಲುಬಾಗಿದ್ದರು. ಯುವರಾಜ್ ತಮ್ಮ ಆಟದ ಹಿಂದಿನ ಶಕ್ತಿ ಯಾರು ಎಂಬ ವಿಷಯವನ್ನು ಕೊನೆಗೂ ಬಹಿರಂಗಗೊಳಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಡಿಲಲ್ಲಿ ವಿಶ್ವಕಪ್ ಹಾಕುವುದು ನನ್ನ ಗುರಿಯಾಗಿತ್ತು. ಅದರಂತೆ, ನಾನು ನನ್ನ ಗುರಿಯನ್ನು ತಲುಪಿದ್ದೇನೆ ಎಂದು ಯುವಿ ಹೇಳಿದ್ದಾರೆ.
ವಿಶ್ವಕಪ್ ನಲ್ಲಿ ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದ ಯುವಿ, ನನ್ನ ಆಟದ ಹಿಂದಿನ ಪ್ರೇರಕ ಶಕ್ತಿಯೊಬ್ಬರಿದ್ದಾರೆ ಅವರಿಗೆ ಈ ಆಟ ಅರ್ಪಿತ ಎಂದಿದ್ದರು. ಆ ವ್ಯಕ್ತಿ ಎಂಬ ರಹಸ್ಯವನ್ನು ಫೈನಲ್ ನಂತರ ಹೇಳುತ್ತೇನೆ ಎಂದಿದ್ದರು. ಯುವಿಯ ಹೇಳಿದ ಆ ವ್ಯಕ್ತಿ ಯಾರು ಎಂದು ತಿಳಿಯದೆ ಕಿಮ್ ಶರ್ಮಾ ರಿಂದ ಹಿಡಿದು ಯುವರಾಜ್ ಸಿಂಗ್ ಹಳೆ, ಹೊಸ ಗೆಳೆತಿಯರ ಹೆಸರನ್ನು ಹೊರಕ್ಕೆ ತರಲಾಯಿತು. ಆದರೆ, ಕೊನೆಗೂ ಯುವರಾಜ್ ಅವರ ವಿಶೇಷ ವ್ಯಕ್ತಿ ಯಾರೆಂದು ಜಗಜಾಹ್ಹೀರಾಗಿದೆ.
ಸಚಿನ್ ಗಾಗಿ ನಾನು ಈ ವಿಶ್ವಕಪ್ ಆಡಿದ್ದೇನೆ. ನನ್ನ ಈ ಸಾಧನೆಗೆ ಸಚಿನ್ ಕಾರಣ. ಸಚಿನ್ ಗೆ ಇದಕ್ಕಿಂತ ಹೆಚ್ಚಿನ ಕೊಡುಗೆ ಕೊಡಲು ಸಾಧ್ಯವೇ? ನನ್ನ ಜೀವಮಾನದ ಸಾಧನೆಯನ್ನು ಸಚಿನ್ ಗೆ ಅರ್ಪಿಸುತ್ತೇನೆ. 19 ವರ್ಷದೊಳಗಿನವರ ವಿಶ್ವಕಪ್, ಟಿ20 ವಿಶ್ವಕಪ್ ಗೆದ್ದ ಬಳಿಕ ವಿಶ್ವಕಪ್ 2011 ಗೆದ್ದಿರುವುದು ವಿಶೇಷ ಸಂತಸ ತಂದಿದೆ. ನನ್ನ ತಂದೆ, ತಾಯಿ, ಗುರೂಜಿ, ಬೌಲಿಂಗ್ ಸಲಹೆ ನೀಡಿದ ನರೇಂದ್ರ ಹಿರ್ವಾನಿ ಹಾಗೂ ಅಭಿಮಾನಿಗಳಿಗೆ ನಾನು ಚಿರಋಣಿ ಎಂದು ಗದ್ಗದಿತರಾದ ಯುವರಾಜ್ ಹೇಳಿದ್ದಾರೆ.
ಧೋನಿ, ಸೌರವ್ ಗೆ ಥ್ಯಾಂಕ್ಸ್: ಕಷ್ಟದ ಸಂದರ್ಭದಲ್ಲೂ ತಂಡದಲ್ಲಿ ಸ್ಥಾನ ಕಲ್ಪಿಸಿ, ಹುರಿದುಂಬಿಸಿದ ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಟೀಕಾಕಾರರಿಗೆ ಬ್ಯಾಟಿಂಗ್ ಮೂಲಕ ಉತ್ತರಿಸುವಂತೆ ನೀಡಿದ ಸಲಹೆಯನ್ನು ಸಾರ್ಥಕಗೊಳಿಸಿದ ತೃಪ್ತಿಯಿದೆ ಎಂದು ಯುವಿ ಹೇಳಿದ್ದಾರೆ. 29 ವರ್ಷದ ಚಂಡೀಗಢದ ಈ ಆಟಗಾರ ವಿಶ್ವಕಪ್ 2011ರಲ್ಲಿ 369ರನ್ ಗಳಿಸಿದ್ದಲ್ಲದೆ 15 ವಿಕೆಟ್ ಪಡೆದು ಅದ್ಭುತ ಸಾಧನೆ ಮೆರೆದಿದ್ದಾರೆ.












Click it and Unblock the Notifications