ಸಂಡೂರಿನಲ್ಲೂ ಅಕ್ರಮ ಗಣಿಗಾರಿಕೆ : ಬರಲಿದೆ ಸಿಇಸಿ

ಸಿಇಸಿ ಅಧ್ಯಕ್ಷ ಪಿ.ವಿ. ಜಯಕ್ರಿಷ್ಣನ್, ಸದಸ್ಯ ಕಾರ್ಯದರ್ಶಿ ಎಂ.ಕೆ. ಜೀವ್ರಾಜಕಾ, ಸದಸ್ಯ ಮಹೇಂದ್ರವ್ಯಾಸ್, ಅಮಿಕಸ್ ಕ್ಯೂರಿಗಳಾಗಿ ಎ.ಡಿ.ಎನ್. ರಾವ್ ಮತ್ತು ಸಿದ್ಧಾರ್ಥ ಚೌಧರಿ ಅವರು ಈ ತಂಡದಲ್ಲಿದ್ದು, ಮಾರ್ಚ್ 25ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸುವ ತಂಡ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಜೊತೆ ಸಭೆ ನಡೆಸುವರು.
ಮಾರ್ಚ್ 26ರ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬಳ್ಳಾರಿ ತಲುಪುವ ತಂಡ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದೆ. ಅಗತ್ಯ ಇದ್ದಲ್ಲಿ ಮಾರ್ಚ್ 27ರ ಭಾನುವಾರ ಕೂಡ ವಿವಾದಿತ ಸ್ಥಳಕ್ಕೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಮಾರ್ಚ್ 28ರ ಸೋಮವಾರ ಬೆಂಗಳೂರಿಗೆ ಪ್ರಯಾಣಿಸುವ ಸಿಇಸಿ ತಂಡ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ದೆಹಲಿಗೆ ಪ್ರಯಾಣಿಸಲಿದ್ದಾರೆ.
ಹಿನ್ನೆಲೆ : ಸಂಡೂರು ತಾಲೂಕಿನ ರಾಮಘಡ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸಂಡೂರು ರಾಜಮನೆತನ ಹಾಗೂ ಬ್ರಿಟಿಷ್ ಸರ್ಕಾರದ ಮಧ್ಯೆ ಒಪ್ಪಂದವಾಗಿತ್ತು. ಆಗಿನ ಕಾಲದಲ್ಲಿ ಈ ಪ್ರದೇಶವನ್ನು ಸಂಡೂರುನ ಮಹಾರಾಜ ಘೋರ್ಪಡೆ ವಂಶದವರಿಗೆ ನೀಡಲಾಗಿತ್ತು. ಆಗ, ಕೇವಲ 2 ಸರ್ವೆ ನಂಬರ್‌ಗಳು ಚಾಲ್ತಿಯಲ್ಲಿ ಇದ್ದವು. ಕಾಲಾನಂತರದಲ್ಲಿ ಸರ್ವೆ ನಂಬರ್‌ಗಳ ಸಂಖ್ಯೆ ಹೆಚ್ಚಾಗಿ 35ಕ್ಕೂ ಹೆಚ್ಚು ಕಂಪನಿಗಳು ಗಣಿಗಾರಿಕೆ ನಡೆಸುತ್ತಿವೆ. ಇವುಗಳಲ್ಲಿ ಬಹುತೇಕವು ಗಡಿ ಉಲ್ಲಂಘನೆ ಸೇರಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿವೆ. ಅಷ್ಟೇ ಅಲ್ಲ, ಪ್ರಸ್ತುತ ಈ ಪ್ರದೇಶದಲ್ಲಿಯ ಗಣಿ ಕಂಪನಿಗಳು ವ್ಯಾಪಕ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿವೆ ಎನ್ನಲಾಗಿದೆ.
ಈ ಕುರಿತು ಹುಬ್ಬಳ್ಳಿಯ ವಕೀಲ, ಪರಿಸರವಾದಿ ಎಸ್.ಆರ್. ಹಿರೇಮಠ್ ಅವರು ಸಮಾಜ ಪರಿವರ್ತನಾ ಸಮುದಾಯ ಎನ್ನುವ ಸಂಘಟನೆಯ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು ಮಾಡಿ ಬಳ್ಳಾರಿ ಜಿಲ್ಲೆ ಹಾಗೂ ಆಂಧ್ರದ ಗಡಿಯಲ್ಲಿ ನಡೆಯುತ್ತಿರುವ ಗಡಿ ಒತ್ತುವರಿ, ಗಣಿ ಒತ್ತುವರಿ ವಿಷಯ ಕುರಿತು ಹೋರಾಟ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅವ್ಯಾಹತವಾಗಿ, ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ - ಅನಧಿಕೃತ ಗಣಿಗಾರಿಕೆಯ ವಿವಾದಕ್ಕೆ ಮಹತ್ವ ಬಂದಿದ್ದು, ಸಾಕಷ್ಟು ಗಣಿ ಕಂಪನಿಗಳಲ್ಲಿ ಕಂಪನ ಮೂಡಿಸಿದೆ. ಈಗ ಸಿಇಸಿ ಭೇಟಿ ನೀಡುತ್ತಿರುವ ಪ್ರದೇಶದಲ್ಲಿ ಅತ್ಯಂತ ಉತ್ಕೃಷ್ಟ ದರ್ಜೆಯ ಕಬ್ಬಿಣದ ಅದಿರು ಇದೆ.












Click it and Unblock the Notifications