ದುಬೈ ಗಂಡನಿಂದ ದಬ್ಬಿಸಿಕೊಂಡ ಬೆಂಗಳೂರು ಮಹಿಳೆ

ಬೆಂಗಳೂರಿನಲ್ಲಿ ವೈದ್ಯಕೀಯ ಆರೋಗ್ಯ ಇನ್ ಸ್ಪೆಕ್ಟರ್ ಆಗಿದ್ದ ಸಫೀನಾ ಕಾವಲ್ ಳನ್ನು ದುಬೈನಲ್ಲಿ ನೆಲೆಸಿರುವ ವ್ಯಕ್ತಿಯೊಂದಿಗೆ ಕಳೆದ ವರ್ಷ ಏಪ್ರಿಲ್ 13ರಂದು ಅತ್ಯಂತ ವಿಜೃಂಭಣೆಯಿಂದ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ಏನಿಲ್ಲವೆಂದರೂ 35 ಲಕ್ಷ ರು.(2 ಲಕ್ಷ 85 ಸಾವಿರ ದಿರ್ಹಾಮ್)ಯನ್ನು ನೀರಿನಂತೆ ಸುರಿಯಲಾಗಿತ್ತು.
ಇಷ್ಟೆಲ್ಲ ಖರ್ಚು ಮಾಡಿದ್ದರೂ ಮೂರು ತಿಂಗಳ ನಂತರ ದುಬೈಗೆ ಆಗಮಿಸಿದಾಗ ಸಫೀನಾಗೆ ಭಾರೀ ಆಘಾತ ಕಾದಿತ್ತು. ದೈಹಿಕವಾಗಿ ಮತ್ತು ಮಾನಸಿಕವಾಗಿ ದೌರ್ಜನ್ಯ ನಡೆಸಲಾರಂಭಿಸಿದ ಭಂಡ ಗಂಡ ಮತ್ತಷ್ಟು ವರದಕ್ಷಿಣೆ ತರಬೇಕೆಂದು ಪೀಡಿಸಲಾರಂಭಿಸಿದ. ನಂತರ ಬಲವಂತವಾಗಿ ವಿಚ್ಛೇದನವನ್ನೂ ಪಡೆದುಕೊಂಡ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ತನಗೆ ಆಗಿರುವ ಮಾನಸಿಕ ಆಘಾತವನ್ನು ವಿವರಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಸಫೀನಾ ಯುಎಇನ ಭಾರತೀಯ ದೂತಾವಾಸಕ್ಕೆ ಪತ್ರ ಬರೆದಿದ್ದಾಳೆ. ತನ್ನ ಗಂಡ ಬೇರೆ ಮಹಿಳೆಯೊಂದಿ ಅನೈತಿಕ ಸಂಬಂಧ ಕೂಡ ಹೊಂದಿದ್ದು, ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗಲೆಲ್ಲ ಹೆಚ್ಚಿನ ಹಣ ತರಬೇಕೆಂದು ದೌರ್ಜನ್ಯವೆಸಗಿದ್ದಾನೆ ಎಂದು ದೂರಿದ್ದಾಳೆ.
ಸಾಲದೆಂಬಂತೆ, ಫೋನ್ ಮಾಡಲು ಕೂಡ ಅವಕಾಶ ನೀಡದೆ ಕೋಣೆಯಲ್ಲಿ ಕೂಡಿ ಹಾಕಿದ್ದ. ಹುಷಾರಿಲ್ಲದಾಗ ಔಷಧಿಯನ್ನೂ ನೀಡಲಿಲ್ಲ. ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೇ ಹೀಗೆಲ್ಲ ಮಾಡುತ್ತಿದ್ದ. ನಂತರ ದುಬೈ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ. ತನಗೆ ತಿಳಿಯದ ಅರೇಬಿಕ್ ಭಾಷೆಯಲ್ಲಿರುವ ಕಾಗದಪತ್ರಕ್ಕೆ ಬಲವಂತವಾಗಿ ಸಹಿಯನ್ನೂ ಹಾಕಿಸಿಕೊಂಡಿದ್ದಾನೆ ಎಂದು ಸಫೀನಾ ಅಲವತ್ತುಕೊಂಡಿದ್ದಾಳೆ.
ವಿಚ್ಛೇದನ ಸಿಗುತ್ತಿದ್ದಂತೆ ಆಕೆಯನ್ನು ಗಂಡ ಮನೆಯಿಂದ ಹೊರಹಾಕಿದ್ದಾನೆ. ಶಾರ್ಜಾದ ಭಾರತೀಯ ಸಂಘಟನೆ ಮತ್ತು ಭಾರತೀಯ ದೂತಾವಾಸದ ಸಹಾಯದಿಂದ ಸಫೀನಾ ಭಾರತಕ್ಕೆ ಮರಳಿದ್ದಾಳೆ. ಗಂಡ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದ ಪಾಸ್ ಪೋರ್ಟ್ ಮತ್ತಿತರ ವಸ್ತುಗಳನ್ನು ಆಕೆಗೆ ನೀಡಬೇಕೆಂದು ದೂತಾವಾಸ ಆಗ್ರಹಿಸಿದಾಗ ಗಂಡ ಮರಳಿ ನೀಡಿದ್ದಾನೆ. ಭಾರತದ ನ್ಯಾಯಾಲಯದಲ್ಲಿ ವರದಕ್ಷಿಣೆ ಹಿಂಸೆ ನೀಡಿದ್ದಕ್ಕಾಗಿ ಗಂಡನ ವಿರುದ್ಧ ಮೊಕದ್ದಮೆ ಹೂಡಲಿದ್ದಾಳೆ. "No woman should suffer the way I did" ಎಂದು ಸಫೀನಾ ಕಾವಲ್ ನೋವಿನಿಂದ ಹೇಳಿದ್ದಾಳೆ.












Click it and Unblock the Notifications