ಚಿರು ಪುತ್ರಿ ಶ್ರೀಜಾಗೆ ಶುರುವಾಯ್ತು ಗಂಡನ ಕಾಟ

ಸೋಮವಾರ ಬೆಳಗ್ ಬೆಳಗ್ಗೆಯೇ ಪೊಲೀಸ್ ಠಾಣೆ ಮೆಟ್ಟಿಲು ತುಳಿದ ಶ್ರೀಜಾ, ತವರಿನಿಂದ ವರದಕ್ಷಿಣೆ ತಗೊಂಡು ಬಾ ಎಂದು ಪತಿರಾಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಕೆಲವು ತಿಂಗಳುಗಳಿಂದ ನನ್ನನ್ನು ಹಿಂಸಿಸುತ್ತಿದ್ದಾನೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮೊರೆಯಿಟ್ಟಿದ್ದಾಳೆ. ಕುಟುಂಬದ ಮೂಲಗಳ ಪ್ರಕಾರ ಪುತ್ರಿಯ ಪ್ರೇಮಕ್ಕಾಗಿ ಅಳಿಮಯ್ಯ ಸಿರೀಶ್-ಗೆ ಚಿರು ಈಗಾಗಲೇ ಅನೇಕ ಕೋಟಿ ಕೋಟಿ ರುಪಾಯಿ ನೀಡಿದ್ದಾರೆ ಎನ್ನಲಾಗಿದೆ.
'ಆದರೆ ಇದಕ್ಕೆ ಕೊನೆ ಎಂಬುದೇ ಇಲ್ಲವೆಂಬಂತೆ ಸಿರೀಶನ ದುರಾಸೆ, ದುರ್ವತನೆಗಳು ವಿಪರೀತವಾಗಿವೆ. ದಿನಾ ಕುಡಿದು ಬಂದು ಪತ್ನಿಯನ್ನು ಪೀಡಿಸುತ್ತಿದ್ದಾನೆ. ಇತ್ತೀಚೆಗೆ ನಿಮ್ಮಪ್ಪನಿಂದ 1.5 ಕೋಟಿ ರುಪಾಯಿ ಇಸ್ಕೊಂಡು ಬಾ. ಇಲ್ಲಾಂದ್ರೆ ಹುಷಾರ್ ಎಂದು ಬೆದರಿಕೆಯೊಡ್ಡಿದ್ದಾನಂತೆ. ಪಾಪ ಆಯಮ್ಮ ಗಂಡನ ಕಾಟ ತಡೆಯಲಾರದೆ ಸೀದಾ ನಮ್ಮ ಸ್ಟೇಷನ್-ಗೆ ಬಂದು ದೂರು ನೀಡಿದ್ದಾಳೆ' ಎಂದು ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೂರು ಬಂದ ತಕ್ಷಣವೇ ಸಿಸಿಎಸ್-ನ ಮಹಿಳಾ ಪೊಲೀಸರು ಭಾರತೀಯ ದಂಡಸಂಹಿತೆಯ 498- ಎ ಸೆಕ್ಷನ್ ಅನುಸಾರ (ವಿವಾಹಿತ ಮಹಿಳೆಗೆ ಕಿರುಕುಳ ನೀಡುವುದರ ವಿರುದ್ಧ) ಸಿರೀಶನ ವಿರುದ್ಧ ಕೇಸು ಜಡಿದಿದ್ದಾರೆ. ಅವನನ್ನು ಸೋಮವಾರವೇ ವಶಕ್ಕೆ ತೆಗೆದುಕೊಂಡಿದ್ದಾರಾದರೂ ಅಧಿಕೃತವಾಗಿ ಮಂಗಳವಾರ ಬಂಧಿಸುವ ಸಾಧ್ಯತೆ ಇದೆ. ಸಿರೀಶನ ಅಪ್ಪ ಅಮ್ಮನನ್ನೂ ಬಂಧಿಸುವ ಸೂಚನೆಗಳಿವೆ. ಇನ್ನು, ನಟ ಚಿರು ಮಗಳ ದುಃಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಮಾಧ್ಯಮಗಳಿಗೆ ದೊರಕಿಲ್ಲ.
ಚಿರು ಚಿಕ್ಕ ಮಗಳು ಶ್ರೀಜಾ ಅಪ್ಪನ ಮಾತನ್ನು ಗೌರವಿಸದೆ 2007ರ ಅಕ್ಟೋಬರ್-ನಲ್ಲಿ ಪ್ರೇಮ ಕಾವಾಲಿ ಎನ್ನುತ್ತಾ ಪಕ್ಕಾ ಸಿನಿಮಾ ಶೈಲಿಯಲ್ಲಿ ಸಿರೀಶನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಅಪ್ಪ ನನ್ನ ಮದುವೆ ಮುರಿಯಲು ಯತ್ನಿಸುತ್ತಿದ್ದಾನೆ. ಆತನದಿಂದ ನಮ್ಮನ್ನು ರಕ್ಷಿಸಿ ಎಂದು ದಿಲ್ಲಿ ಹೈಕೋರ್ಟ್-ಗೆ ಅಲವತ್ತುಕೊಂಡಿದ್ದಳು. ನ್ಯಾಯಾಲಯ ಚಿರುಗೆ ಚುಪ್ ಹೊ ಎಂದು ಗದರಿಸಿತ್ತು. ಶ್ರೀಜಾ ದಂಪತಿಗೆ ಎರಡೂವರೆ ವರ್ಷದ ಮಗಳಿದ್ದಾಳೆ.












Click it and Unblock the Notifications