ಹೌದೇ, ಯಡಿಯೂರಪ್ಪರಿಂದ ಹೊಸ ಚಾನೆಲ್ ?

BS Yeddyurappa to launch news channel?
ಚಾನೆಲ್ ರಾಜಕೀಯ ನಿಧಾನವಾಗಿಯಾದರೂ ಕರ್ನಾಟಕವನ್ನು ವ್ಯಾಪಕವಾಗಿ ಆವರಿಸುತ್ತಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಪಕ್ಷದೊಂದು ಟಿವಿ ವಾಹಿನಿ ಇರುವಾಗ, ನಮ್ಮಲ್ಲಿ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಪ್ರತಿ ಪಕ್ಷಗಳ ಮುಖಂಡರುಗಳು ಈಗಾಗಲೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾಧ್ಯಮಗಳ ಮೇಲೆ ಒಂದು ಹಂತದ ಹಿಡಿತ ಸಾಧಿಸಿಬಿಟ್ಟಿದ್ದಾರೆ. ಆದರೆ, ಮಾಧ್ಯಮ ಸಮೂಹವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಶತ ಪ್ರಯತ್ನಪಟ್ಟು ಸೋತಿರುವ ಯಡಿಯೂರಪ್ಪ ಅವರು ತಮಗಾಗಿ ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸುವ ಯೋಜನೆಯಲ್ಲಿದ್ದಾರಂತೆ.

ಭೂ ಹಗರಣ ವಿಷಯವೊಂದನ್ನು ಹಿಡಿದುಕೊಂಡು ಟಿವಿ ಮಾಧ್ಯಮಗಳು ಇನ್ನೇನು ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಿಬಿಟ್ಟರೂ ಎನ್ನುವಷ್ಟರಲ್ಲಿ ಸಿಎಂ ಬಚಾವಾಗಿದ್ದಾರೆ. ಯಡಿಯೂರಪ್ಪ ಅವರಿಗೂ ಆಚಾರ ವಿಚಾರ, ವಾಮಾಚಾರ, ಗ್ರಹಚಾರ ಎನ್ನುತ್ತಾ ಜ್ಯೋತಿಷಿಗಳ ಬೆನ್ನು ಹತ್ತಿ ಫಲಾಫಲ ಕೇಳಿ ಸಾಕಾಗಿದೆ. ಟಿವಿ ಎಂಬ ಪ್ರಭಾವಿ ಮಾಧ್ಯಮದ ಮೂಲಕ ನೇರವಾಗಿ ಜನ ಸಂಪರ್ಕ ಸಾಧಿಸಲು ಸಾಧ್ಯ ಎಂದು ಸಿಎಂಗೆ ಮನವರಿಕೆಯಾಗಿದೆ ಎಂದು ಸಿಎಂ ಆಪ್ತರು ಹೇಳಿಕೊಂಡಿದ್ದಾರೆ.

ರೆಡ್ಡಿ ಸೋದರರ ಮಾದರಿಯಲ್ಲಿ (ಜನಶ್ರೀ ಚಾನೆಲ್) ಯಡಿಯೂರಪ್ಪ ಅವರು ಒಂದು ಚಾನೆಲ್ ಆರಂಭಿಸಲು ಮನಸ್ಸುಮಾಡಿದ್ದಾರೆ. ಆದರೆ ಯಾರನ್ನು ತಕ್ಷಣಕ್ಕೆ ನಂಬದ ಯಡಿಯೂರಪ್ಪ ಅವರು, ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಚಾನೆಲ್ ಆರಂಭಿಸುವ ಅಥವಾ ಖರೀದಿಸುವ ಯೋಚನೆ ಮಾಡಿದ್ದಾರೆ. ಹೊಸ ಸಂಚಲನ ಸೃಷ್ಟಿಸುತ್ತದೆ ಎನ್ನಲಾಗಿದ್ದ ಜನಶ್ರೀ ಚಾನೆಲ್ ನೀರಸವಾಗಿ ತನ್ನ ಪಾಡಿಗೆ ತಾನು ಎಂಬಂತ್ತಿದೆ. ನೆರೆಯ ರಾಜ್ಯಗಳಲ್ಲಿ ರಾಜಕಾರಣಿಗಳು ತಮ್ಮದೇ ಆದ ನ್ಯೂಸ್ ಚಾನೆಲ್ ಆರಂಭಿಸಿ ಹತ್ತು ವರ್ಷಗಳೇ ಕಳೆದಿದೆ. ಇಲ್ಲೂ ಕೂಡ ಅದೇ ರೀತಿ ಗಾಳಿ ಬೀಸುತ್ತಿದೆ. ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ 'ಕಸ್ತೂರಿ" ಚಾನೆಲ್ ಹುಟ್ಟುಹಾಕಿ ತಮ್ಮ ರಾಜಕೀಯ ಅಸ್ತ್ರವಾಗಿ ಪರಿಣಾಮಕಾರಿಯಾಗಿ ಬೆಳೆಸಿದರು. ಧರ್ಮಪತ್ನಿ ಅನಿತಾ ಅವರು ಚಾನೆಲ್ ನ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಕೊಂಚ ಮಟ್ಟಿಗೆ ಲಾಭ ಕೂಡಾ ಗಳಿಸಿದರು. ಇದರ ಜೋತೆಗೆ ಅಮೋಘ ಕೇಬಲ್ ಟಿವಿ ಕೂಡಾ ಜನಪ್ರಿಯತೆ ಗಳಿಸಿದೆ.

ಪ್ರಪ್ರಥಮ ಕನ್ನಡ ಚಾನೆಲ್ ಆರಂಭಿಸಿದ ದೇವೇಗೌಡರ ಕುಟುಂಬದವರು ಸದ್ಯದಲ್ಲೆ 24 ತಾಸುಗಳ ಸುದ್ದಿವಾಹಿನಿ (ನ್ಯೂಸ್ ಚಾನೆಲ್) ಆರಂಭಿಸಲು ಕಸ್ತೂರಿ ತಂಡ ಸಿದ್ಧತೆ ನಡೆಸಿದೆ. ಈ ನಡುವೆ ಕಾಂಗ್ರೆಸ್ ಪರ ಪ್ರಚಾರ ನೀಡುವ ಸಲುವಾಗಿ ಕಾಂಗ್ರೆಸಿನ ಸತೀಶ್ ಜಾರಕಿಹೋಳಿ 'ಸಮಯ" ಚಾನೆಲ್ ಆರಂಭಿಸಿದರು. ಈ ಮಧ್ಯೆ ಜೆಡಿಎಸ್ ಬೆಂಬಲ ಪಡೆದು ರಾಜ್ಯಸಭಾ ಸದಸ್ಯ ರಾಜೀವ್ ಚಂದಶೇಖರ್ ಬಿಜೆಪಿ ಒಡನಾಟ ಹೊಂದಿರುವ ಅವರು 'ಸುವರ್ಣ" ನ್ಯೂಸ್ ಚಾನೆಲ್ ಆರಂಭಿಸಿದರು. ಯಡ್ಡಿ ಸಂಕಷ್ಟ ಕಾಲದಲ್ಲಿ ಅವರ ರಕ್ಷಣೆಗೆ ಚಾನೆಲ್ ಯತ್ನ ನಡೆಸಿತ್ತಾದರೂ ಬಿಜೆಪಿಯ ಪರವಾಗಿ ಹೆಚ್ಚೇನೂ ವಾಲಲಿಲ್ಲ .ಕೊನೆ ಕೊನೆಗೆ ಯಡಿಯೂರಪ್ಪಗೂ ಸುವರ್ಣಗೂ ಎಲ್ಲಿಲ್ಲದ ಸಮರ ಆರಂಭವಾಗಿಬಿಟ್ಟಿತು. ಯಡಿಯೂರಪ್ಪ ಅವರನ್ನು ಇಳಿಸಲು ಸುವರ್ಣದಲ್ಲಿ ಕಾಣದ ಕೈಗಳ ಕೈವಾಡ ಇದೆ ಎಂಬ ಆರೋಪದ ಸುದ್ದಿ ಕೂಡಾ ಹರಿದಾಡತೊಡಗಿತು.ಇರುವುದರಲ್ಲಿ ಟಿವಿ 9 ರಾಜಕಾರಣಿಗಳಿಂದ ಸ್ವಲ್ಪ ದೂರ ಉಳಿದಿದೆ.

ಆಂಧ್ರದಲ್ಲಿ ಜಗನ್ ಮೋಹನ್ ರೆಡ್ದಿಗೆ ಸಾಕ್ಷಿ, ತೆಲುಗು ದೇಶಂ ಪಕ್ಷಕ್ಕೆ ಪರೋಕ್ಷವಾಗಿ ಈಟಿವಿ, ಚಂದ್ರಬಾಬು ನಾಯ್ಡುಗೆ ಎನ್ ಟಿವಿ, ಸಿನಿ ತಾರೆಗಳ ಹೊಗಳಿಕೆಗೆ ಮೀಸಲಾದ ಮಾ ಟಿವಿ ಹೀಗೆ ಹರಿದು ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆಗೆ ಸನ್ ಟಿವಿ, ಜಯಲಲಿತಾಗೆ ಜಯಾ ಟಿವಿ, ಕಾಂಗ್ರೆಸ್ ಗೆ ಮತ್ತೊಂದು ಚಾನೆಲ್ ಈ ರೀತಿ ಪಕ್ಷದ ಮುಖವಾಣಿಯಾಗಿ ಟಿವಿ ಮಾಧ್ಯಮಗಳು ಗುರುತಿಸಿಕೊಂಡಿವೆ. ಕರ್ನಾಟಕದ ಟಿವಿ ಮಾಧ್ಯಮಗಳು ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಏಕಮುಖ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಹೀಗಾಗಿ, ಯಡಿಯೂರಪ್ಪ ಅವರ ಆಪ್ತರು ಕೂಡಾ ಹೊಸ ನ್ಯೂಸ್ ಚಾನೆಲ್ ಆರಂಭಿಸಲು ಯೋಜಿಸಿದೆ. ಆದರೆ, ಹೊಸ ಚಾನೆಲ್ ಗೆ ಸದ್ಯಕ್ಕೆ ಅನುಮತಿ ಸಿಗುವುದು ಅನುಮಾನ. ಯಾವುದಕ್ಕೂ ಕಾದು ನೋಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+