ಕುಮಾರಣ್ಣ ಶ್ರೀರಾಮುಲು ರಹಸ್ಯ ಭೇಟಿ

ನಗರದ ರಿಸಾರ್ಟ್ ವೊಂದರಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಆಪರೇಷನ್ ಕಮಲಕ್ಕೆ ಪ್ರತಿತಂತ್ರ ರೂಪಿಸಲು ಕುಮಾರಸ್ವಾಮಿ ನಡೆಸುತ್ತಿರುವ ಮೊದಲ ಹೆಜ್ಜೆ ಇದಾಗಿದೆ. ಕೊಪ್ಪಳ ಶಾಸಕ ಕರಡಿ ಸಂಗಣ್ಣವರನ್ನು ಪಕ್ಷಕ್ಕೆ ಸೇರಿಸಿ ಕೊಂಡಿರುವುದನ್ನು ಮೂಲ ಬಿಜೆಪಿ ನಾಯಕರುಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಬಿಜೆಪಿಯಲ್ಲಿ ಮತ್ತೊಮ್ಮೆ ಬಂಡಾಯದ ಬೆಂಕಿ ಹತ್ತಿಕೊಂಡರೆ ಅದರಲ್ಲಿ ಚಳಿ ಕಾಯಿಸಿಕೊಳ್ಳುವ ಉದ್ದೇಶ ಈ ನಾಯಕರಿಗಿದೆ ಎಂಬ ಗುಲ್ಲೆದ್ದಿದೆ.
ಗಣಿಧಣಿಗಳ ವಿರುದ್ದ ಸರ್ವೋಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ತನಿಖೆ ನಡೆಸುತ್ತಿರುವುದು ಮತ್ತು ಸಿಬಿಐ ದಾಳಿಗೆ ಸಿಎಂ ಪರೋಕ್ಷ ಸಹಕಾರ ನೀಡಿರುವುದು ರೆಡ್ಡಿ ಸಹೋದರರಿಗೆ ಕಗ್ಗಂಟಾಗಿ ಪರಿಣಮಿಸಿದ್ದು ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಲು ಕುಮಾರಸ್ವಾಮಿ ಮೊರೆ ಹೊಕ್ಕಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಬಿಜೆಪಿಯ 16 ಶಾಸಕರು ಮತ್ತು ಪಕ್ಷೇತರ ಶಾಸಕರು ಬಂಡಾಯ ಎದ್ದ ಸಂದರ್ಭದಲ್ಲಿ ಕೂಡಾ ಈ ಇಬ್ಬರು ನಾಯಕರುಗಳು ಗುಪ್ತ ಮಾತುಕತೆ ನಡೆಸಿದ್ದರು. ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆಯಲು ಪ್ರಯತ್ನ ಪಟ್ಟರೆ ಬಿಜೆಪಿ ಶಾಸಕರ ಸಂಖ್ಯೆಯನ್ನು 106 ರಿಂದ 96ಕ್ಕೆ ಇಳಿಸ ಬೇಕಾಗುತ್ತದೆ ಎಂದು ಎಚ್ಡಿಕೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು.












Click it and Unblock the Notifications