ಯುವಿ ಆಲ್ ರೌಂಡ್ ಆಟಕ್ಕೆ ಐರ್ಲೆಂಡ್ ನಿರುತ್ತರ
ಬೆಂಗಳೂರು, ಮಾ. 6 : ದೈತ್ಯ ಸಂಹಾರಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದಿದ್ದ ಐರ್ಲೆಂಡ್ ತಂಡವನ್ನು ಅತ್ಯಂತ ಎಚ್ಚರಿಕೆಯಿಂದಲೇ ಎದುರಿಸಿದ ಭಾರತ ಐದು ವಿಕೆಟ್ ಜಯ ಸಾಧಿಸಿ, ಬಿ ಗುಂಪಿನಲ್ಲಿ 5 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇನ್ನೂ 24 ಚೆಂಡುಗಳಿರುವಾಗಲೆ ಐರ್ಲೆಂಡ್ ನೀಡಿದ್ದ 208 ರನ್ ಗುರಿಯನ್ನು 5 ವಿಕೆಟ್ ಕಳೆದುಕೊಂಡು ಮುಟ್ಟಿತು.
ಕಳೆದೆರಡು ಪಂದ್ಯಗಳಲ್ಲಿ ರನ್ ಸುರಿಮಳೆಯನ್ನು ಕಂಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಅಂತಹ ರನ್ ಹೊಳೆ ಹರಿಯಲಿಲ್ಲ. ನಿಧಾನ ಗತಿಯ ಪಿಚ್ ಮೇಲೆ ದೊಡ್ಡ ಮೊತ್ತ ದಾಖಲಿಸಲು ಐರ್ಲೆಂಡ್ ತಿಣುಕಾಡಿದರೆ, ಭಾರತ ಕೂಡ ಜಯ ಸಾಧಿಸಲು ಸಾಕಷ್ಟು ಬೆವರು ಹರಿಸಬೇಕಾಯಿತು.
ಬಹು ದಿನಗಳ ನಂತರ ಉತ್ತಮ ಫಾರ್ಮ್ ಕಂಡುಕೊಂಡ ಯುವರಾಜ್ ಸಿಂಗ್ ಅವರ ಉತ್ತಮ ಆಲ್ ರೌಂಡ್ ಆಟ ಇಂದಿನ ಪಂದ್ಯದ ಹೈಲೈಟ್. ಬೌಲಿಂಗ್ ನಲ್ಲಿ 10 ಓವರುಗಳಲ್ಲಿ ಕೇವಲ 31 ರನ್ ನೀಡಿ ಐದು ವಿಕೆಟ್ ಕಬಳಿಸಿ ಮಿಂಚಿದ್ದ ಯುವರಾಜ್, ಬ್ಯಾಟಿಂಗ್ ನಲ್ಲಿಯೂ ಮೂರು ಬೌಂಡರಿಗಳುಳ್ಳ ಅಜೇಯ 50 ರನ್ ಗಳಿಸಿ ಭಾರತವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದರು. ಸಹಜವಾಗಿ ಪಂದ್ಯದ ಪುರುಷೋತ್ತಮ ಪ್ರಶಸ್ತಿ ಯುವಿ ಪಾಲಾಯಿತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಐದು ವಿಕೆಟ್ ಕಬಳಿಸಿ 50 ರನ್ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. [ಸ್ಕೋರ್ ವಿವರ]
ವೀರೇಂದ್ರ ಸೆಹ್ವಾಗ್ ರಿಂದ ಹಿಡಿದು ಏಳನೇ ನಂಬರ್ ಬ್ಯಾಟ್ಸ್ ಮನ್ ಯುಸೂಫ್ ಪಠಾಣ್ ವರೆಗೆ ಉತ್ತರ ಬ್ಯಾಟಿಂಗ್ ಸಾಲನ್ನು ಹೊಂದಿರುವ ಭಾರತ ಸುಲಭವಾಗಿಯೇ ಜಯ ಸಾಧಿಸುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ, ಆರಂಭದಲ್ಲಿಯೇ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರ ವಿಕೆಟ್ಟನ್ನು ಕಳೆದುಕೊಂಡ ಭಾರತ, ಎಚ್ಚರಿಕೆಯ ಆಟಕ್ಕಿಳಿಯಿತು. ಯುಸೂಫ್ ಪಠಾಣ್ ಕ್ರೀಸ್ ಗೆ ಬರುವವರೆಗೆ ಭಾರತ ತಿಣುಕಾಡುತ್ತಲೇ ಗುರಿಯತ್ತ ಸಾಗುತ್ತಿತ್ತು.
167 ರನ್ ಆಗಿದ್ದಾಗ ಐದನೆಯವರಾಗಿ ಧೋನಿ ಔಟಾದ ನಂತರ ಪಂದ್ಯಕ್ಕೆ ರೋಚಕ ತಿರುವು ಮತ್ತು ಜೀವಂತಿಕೆ ದೊರೆಯಿತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟುವ ಮುಖಾಂತರ ಯುಸೂಫ್ ಪಠಾಣ್ ಪಂದ್ಯಕ್ಕೆ ವೇಗ ತಂದರು. ಮೂರು ಭರ್ಜರಿ ಸಿಕ್ಸರ್ ಮತ್ತು ಎರಡು ಬೌಂಡರಿ ಬಾರಿಸಿದ ಪಠಾಣ್ ಎಂದಿನ ನೈಜ ಆಟ ಪ್ರದರ್ಶಿಸಿ 30 ರನ್ ಗಳಿಸಿ ಅಜೇಯರಾಗುಳಿದರು. ಸಚಿನ್ ತೆಂಡೂಲ್ಕರ್ 38 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಅವರಿಗೆ ಉತ್ತಮ ಬೆಂಬಲ ನೀಡಿದ ವಿರಾಟ್ ಕೋಹ್ಲಿ ಮತ್ತು ಯುವಿಗೆ ಉತ್ತಮ ಸಾಥ್ ನೀಡಿದ ನಾಯಕ ಧೋನಿ ತಲಾ 34 ರನ್ ಗಳಿಸಿದರು.
ಇದಕ್ಕೂ ಮುನ್ನ ಭಾರೀ ನಿರೀಕ್ಷೆಯೊಂದಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್, ಆರಂಭದಲ್ಲಿ 9 ರನ್ ಆಗುವಷ್ಟರಲ್ಲಿ ಜಾಹೀರ್ ಖಾನ್ ಅವರಿಗೆ ಎರಡು ವಿಕೆಟ್ ಒಪ್ಪಿಸಿ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ನಾಯಕ ಪೋರ್ಟರ್ ಫೀಲ್ಡ್ ಮತ್ತು ಕೀಪರ್ ನೀಲ್ ಓಬ್ರಯಾನ್ ಅವರ ಸಮಯೋಚಿತ ಶತಕದ ಜೊತೆಯಾಟದಿಂದ ಚೇತರಿಸಿಕೊಂಡಿತು. ಒಂದು ಹಂತದಲ್ಲಿ ಬೃಹತ್ ಮೊತ್ತ ಕಲೆಹಾಕುವ ಸೂಚನೆಯನ್ನು ನೀಡಿತ್ತು. ಆದರೆ, ಕೋಹ್ಲಿ ಅವರ ಉತ್ತಮ ಕ್ಷೇತ್ರರಕ್ಷಣೆಯಿಂದಾಗಿ ಓಬ್ರಯಾನ್ ರನೌಟ್ ಆದರ ನಂತರ ಭಾರತ ಐರ್ಲೆಂಡ್ ಮೇಲೆ ಪೂರ್ತಿ ಹಿಡಿತ ಸಾಧಿಸಿತು. ಇಂಗ್ಲೆಂಡ್ ವಿರುದ್ಧ ಬಿರುಗಾಳಿಯ ಶತಕ ಬಾರಿಸಿದ್ದ ಕೆವಿನ್ ಓಬ್ರಯಾನ್ ಅವರು ಯುವರಾಜ್ ಅವರ ಬೌಲಿಂಗ್ ನಲ್ಲಿ ಅವರಿಗೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ವಾಪಸಾದ ನಂತರ ಪಂದ್ಯ ರೋಚಕತೆ ಕಳೆದುಕೊಂಡಿತು. ನಾಯಕ ಪೋರ್ಟರ್ ಫೀಲ್ಡ್ (75) ಹೊರತಾಗಿ ಯಾವ ಆಟಗಾರನೂ ಭಾರತದ ಬೌಲಿಂಗನ್ನು ಸಮರ್ಥವಾಗಿ ಎದುರಿಸಲಿಲ್ಲ.
ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ ತಂಡವನ್ನು ಮಾರ್ಚ್ 9, ಬುಧವಾರದಂದು ನವದೆಹಲಿಯಲ್ಲಿ ಭಾರತ ಎದುರಿಸಲಿದೆ. ನಂತರ ಇನ್ನೊಂದು ಪ್ರಮುಖ ಪಂದ್ಯದಲ್ಲಿ ಮಾರ್ಚ್ 12ರಂದು ನಾಗಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೆಣಸಲಿದೆ.












Click it and Unblock the Notifications