ಬಾಲ್ಕನಿಯಿಂದ ಹಾರಿ ಟೆಕ್ಕಿ ಪತ್ನಿ ಆತ್ಮಹತ್ಯೆ

ಮೃತರನ್ನು ಮಧುಮಿತಾ ಮಜುಂದಾರ್ (27) ಎಂದು ಗುರುತಿಸಲಾಗಿದ್ದು ಅವರಿಗೆ ಮೂರು ತಿಂಗಳ ಹೆಣ್ಣು ಮಗುವಿದೆ. ಈ ಘಟನೆ ನಡೆದಾಗ ವಿಜಿಎಸ್ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಏಕಾಂಗಿಯಾಗಿದ್ದರು ಎಂದು ತಿಳಿದುಬಂದಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದುದನ್ನು ಕಂಡ ನೆರೆಹೊರೆಯವರು ಕೂಡಲೆ ಮಧುಮಿತಾ ಅವರ ಪತಿ ಅರುಣ್ ಮಜುಂದಾರ್ ಅವರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರಿಗೆ ವಿಷಯ ತಿಳಿಸಿ, ಮಧುಮಿತಾ ಅವರನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ದಾರಿಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಧುಮಿತಾ ಅವರು ಮನೋವಿಜ್ಞಾನಿಯ ಹತ್ತಿರವೂ ಚಿಕಿತ್ಸೆ ಪಡೆಯುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಕೂಡ ಅವರು ಅತಿಯಾಗಿ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು.
ದಂಪತಿಗಳ ನಡುವೆ ಯಾವುದೇ ಮನಸ್ತಾಪವಿರಲಿಲ್ಲ ಎಂಬ ಅಂಶವನ್ನೂ ಪೊಲೀಸರು ದೃಢಪಡಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅರುಣ್ ಮತ್ತು ಮಧುಮಿತಾ ಮದುವೆಯಾಗಿತ್ತು. ಕೆಲಸ ಮಾಡುತ್ತಿದ್ದ ಮಧುಮಿತಾ ಅನಾರೋಗ್ಯದಿಂದಾಗಿ ಒಂದು ವರ್ಷದ ಹಿಂದೆ ಕೆಲಸ ತ್ಯಜಿಸಿದ್ದರು.












Click it and Unblock the Notifications