ಶಿಕಾರಿಪುರ ಜಿಲ್ಲೆಯಾಗಲು ಮಹೂರ್ತ ಸರಿ ಇದೆಯೆ?

ಈ ಹಿಂದೆ ನೂತನ ಶಿಕಾರಿಪುರ ಜಿಲ್ಲಾ ಕೇಂದ್ರ ರಚನೆ ಮಾಡಲು ಸರಕಾರ ನಿರ್ಧರಿಸಿದೆಯೆಂಬ ವಿಷಯ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ರಾಜ್ಯದ ವಿವಿಧೆಡೆ ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ, ಶಿಕಾರಿಪುರವನ್ನು ಜಿಲ್ಲಾ ಕೇಂದ್ರ ಎಂದು ಘೋಷಿಸಲು ಇನ್ನೂ ಕಾಲ ಕೂಡಿ ಬಂದಿಲ್ಲ ಎಂದು ಸಿಎಂ ಅವರ ಪುತ್ರ, ಸಂಸದ ಬಿವೈ ರಾಘವೇಂದ್ರ ಅವರು ಸ್ಪಷ್ಟಪಡಿಸಿದ್ದರು.
ಪ್ರತಿಭಟನೆ : ಶಿಕಾರಿಪುರ ಜಿಲ್ಲಾ ಕೇಂದ್ರ ಮಾಡುವುದಾದರೆ, ನಮ್ಮ ತಾಲೂಕು ಕೇಂದ್ರಗಳನ್ನು ಜಿಲ್ಲಾ ಕೇಂದ್ರವನ್ನಾಗಿ ಘೊಷಣೆ ಮಾಡಿ ಎಂದು ವಿವಿಧೆಡೆಯಿಂದ ವ್ಯಾಪಕ ಒತ್ತಡ ಕೇಳಿಬಂದಿತ್ತು. ಪ್ರತಿಭಟನೆಯ ತೀವ್ರತೆ ಅರಿತ ಮುಖ್ಯಮಂತ್ರಿ ಯಡಿಯೂರಪ್ಪ, ಶಿಕಾರಿಪುರ ಜಿಲ್ಲಾ ಕೇಂದ್ರ ರಚನೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಶಿಕಾರಿಪುರ ಜಿಲ್ಲಾ ಕೇಂದ್ರ ಮಾಡಲಾಗುತ್ತದೆ ಎಂಬುದು ಕೇವಲ ವದಂತಿಯಾಗಿದೆ ಎಂದು ಬಹಿರಂಗವಾಗಿ ಸ್ಪಷ್ಟನೆ ನೀಡಿದ್ದರು.
ಎಲ್ಲೂ ಇಲ್ಲದ ಅಭಿವೃದ್ಧಿ : ಆದರೆ ಮತ್ತೊಂದೆಡೆ ಶಿಕಾರಿಪುರ ತಾಲೂಕಿನಲ್ಲಿ ಸರಕಾರ ನಡೆಸುತ್ತಿರುವ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಿದರೆ, ಇಂದಲ್ಲ ನಾಳೆ ಶಿಕಾರಿಪುರ ಜಿಲ್ಲಾ ಕೇಂದ್ರವಾಗುವುದು ನಿಶ್ಚಿತವೆಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಅಗತ್ಯವಿರುವ ಕಚೇರಿಗಳು-ಕಟ್ಟಡಗಳು ಶಿಕಾರಿಪುರದಲ್ಲಿ ನಿರ್ಮಾಣವಾಗುತ್ತಿದ್ದು ಇದಕ್ಕೆ ಪೂರಕವೆಂಬಂತೆ ಜಿಲ್ಲಾಸ್ಪತ್ರೆ, ರಸ್ತೆಗಳ ಅಗಲೀಕರಣ, ಪಶು ಆಹಾರ ಉತ್ಪಾದನಾ ಘಟಕ ಸೇರಿದಂತೆ ಹತ್ತು ಹಲವು ಯೋಜನೆಗಳು ಶಿಕಾರಿಪುರದಲ್ಲಿ ನಡೆಯುತ್ತಿವೆ.
ನೂರಾರು ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈ ನಡುವೆ ನಕ್ಸಲ್ ನಿಗ್ರಹ ಅಕಾಡಮಿ ತರಬೇತಿ ಕೇಂದ್ರ ಹಾಗೂ ಜಾನಪದ ವಿಶ್ವವಿದ್ಯಾಲಯವನ್ನು ಕೂಡ ಶಿಕಾರಿಪುರದಲ್ಲಿ ಸ್ಥಾಪನೆ ಮಾಡಲು ಸರಕಾರ ನಿರ್ಧರಿಸಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಶಿಕಾರಿಪುರ ಜಿಲ್ಲಾ ಕೇಂದ್ರ ರಚನೆಯಾಗುವುದು ನಿಶ್ಚಿತ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ಬಜೆಟ್ ನತ್ತ ಜಿಲ್ಲೆಯ ಜನರ ಚಿತ್ತ ನೆಟ್ಟಿದ್ದು, ಯಡಿಯೂರಪ್ಪ ಶಿಕಾರಿಪುರ ಜಿಲ್ಲೆ ಘೋಷಣೆ ಮಾಡಲಿದ್ದಾರೆಯೇ? ಇಲ್ಲವೇ? ಎಂಬುದನ್ನು ಕುತೂಹಲದಿಂದ ಜಿಲ್ಲೆಯ ಜನರು ಕಾಯುತ್ತಿದ್ದಾರೆ.
ಶಿಕಾರಿಪುರ ಜಿಲ್ಲೆ ರಚನೆ ಹೇಗೆ?: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ವಿಭಜಿಸಿ ಶಿರಸಿ ತಾಲೂಕಿನಲ್ಲಿರುವ ಬನವಾಸಿ ಒಳಗೊಂಡಂತೆ ಆನವಟ್ಟಿ ತಾಲೂಕು, ಶಿಕಾರಿಪುರ ತಾಲೂಕಿನಲ್ಲಿರುವ ಶಿರಾಳಕೊಪ್ಪ ಪ್ರತ್ಯೇಕಿಸಿ ಹೊಸ ತಾಲೂಕು ಹಾಗೂ ಹೊನ್ನಾಳ್ಳಿ ತಾಲೂಕಿನಲ್ಲಿರುವ ನ್ಯಾಮತಿಯನ್ನು ಪ್ರತ್ಯೇಕಿಸಿ ಹೊಸ ತಾಲೂಕು ರಚನೆ ಮಾಡುವ ಪ್ರಯತ್ನಗಳು ನಡೆದಿದೆ.
ಈ ಮೂರು ಹೊಸ ತಾಲೂಕುಗಳೊಂದಿಗೆ ಶಿಕಾರಿಪುರ, ಸೊರಬ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹಾವೇರಿ ಜಿಲ್ಲೆಯ ಹಿರೇಕೆರೂರು, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಒಳಗೊಂಡಂತೆ ಒಟ್ಟು ಎಂಟು ತಾಲೂಕುಗಳನ್ನು ಒಳಗೊಂಡ ಶಿಕಾರಿಪುರ ಜಿಲ್ಲೆ ರಚನೆಗೆ ನಕಾಶೆ ಸಿದ್ಧಪಡಿಸಲಾಗಿದೆ.












Click it and Unblock the Notifications