ಈ ಸಮಾವೇಶಗಳಿಂದ ಏನು ಪ್ರಯೋಜನ?

BS Yeddyurappa, Siddarmaiah
ಬೆಂಗಳೂರು/ಮೈಸೂರು, ಫೆ. 20 : ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ನಡುವಿನ ಮತ್ತೊಂದು ಸುತ್ತಿನ ಕೆಸರೆರಚಾಟ, ಮಾತಿನ ಯುದ್ಧ ಮುಂದುವರಿದಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಾಂಗ್ರೆಸ್ ತಮ್ಮ ಬತ್ತಳಿಕೆಯಲ್ಲಿರುವ ಎಲ್ಲಾ ಪದ ಪ್ರಯೋಗಗಳನ್ನು ಮಾಡಿವೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರ ಉಪಸ್ಥಿತಿಯಲ್ಲಿ ನಡೆದ 'ಸಾವಿರ ಸಂಭ್ರಮ'ದಲ್ಲಿ ಅಧಿಕಾರ ಉಳಿಸಿಕೊಳ್ಳುತ್ತೇನೆ, ಇನ್ನೂ 20 ವರ್ಷ ವಿರೋಧ ಪಕ್ಷದಲ್ಲಿ ಇರಲು ಕಾಂಗ್ರೆಸ್ ನಾಯಕರೇ ಸಿದ್ಧರಾಗಿರಿ ಎಂದು ಮತ್ತೊಮ್ಮೆ ಭಾವೋದ್ವೇಗಕ್ಕೆ ಯಡಿಯೂರಪ್ಪನವರು ಒಳಗಾದರೆ, ಬಹುವಚನದಿಂದ ಕೆಳಗಿಳಿಯಿರಿ ಯಡಿಯೂರಪ್ಪನವರೇ ಎಂದರೆ ಅವರು ಇಳಿಯುತ್ತಾರಾ ಎಂದು ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಪಹಾಸ್ಯ ಮಾಡಿದರು.

ಯಡಿಯೂರಪ್ಪ ಸಿಡಿಲು : ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿಯಿಂದ ಕಾಂಗ್ರೆಸ್ ಪಕ್ಷ ರೋಸಿ ಹೋಗಿದೆ. ಅವರಿಗೆ ರಾಜ್ಯದ ಅಭಿವೃದ್ಧಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಖಜಾನೆಯನ್ನು ಇಲ್ಲಿಯವರೆಗೆ ಲೂಟಿ ಮಾಡಿರುವ ಕಾಂಗ್ರೆಸ್ ನಮ್ಮನ್ನು ಟೀಕಿಸುವ ನೈತಿಕ ಹಕ್ಕು ಕಳೆದುಕೊಂಡಿದೆ. ಇಂಥ ಪಕ್ಷ ಯಾವುದೇ ಕಾರಣಕ್ಕೂ ತಲೆ ಎತ್ತಲು ಬಿಡಬಾರದು ಎಂದು ಆವೇಶಭರಿತರಾಗಿ ಯಡಿಯೂರಪ್ಪ ಕೂಗಾಡಿದರು.

ಯಾವ ಕ್ಷೇತ್ರದಲ್ಲಿ ನಾವು ಹಿಂದಿದ್ದೇವೆ? ಯಾವುದೇ ಪಕ್ಷ ಮಾಡಿರದ ಅಭಿವೃದ್ಧಿ ಕಾರ್ಯವನ್ನು ಬಿಜೆಪಿ ಮಾಡಿದೆ. ಭೂ ಹಗರಣ, ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಎಲ್ಲ ದಾಖಲೆಗಳನ್ನು ಹಿಡಿದುಕೊಂಡು ಚರ್ಚೆಗೆ ಬರಲಿ, ನಾವು ಸಿದ್ಧರಿದ್ದೇವೆ. ವಿರೋಧ ಪಕ್ಷಗಳು ಎಷ್ಟೇ ಹಾರಾಡಿದರೂ ನಾವು ಐದು ವರ್ಷ ಪೂರ್ಣ ಮಾಡ್ತೇವೆ, ಪೂರ್ಣ ಮಾಡ್ತೇವೆ ಎಂದು ಒತ್ತಿ ಒತ್ತಿ ಯಡಿಯೂರಪ್ಪ ಹೇಳಿದರು.

ಸಿದ್ದರಾಮಯ್ಯ ಗುಡುಗು : ಯಡಿಯೂರಪ್ಪನಂಥ ಭಂಡ, ಢೋಂಗಿ, ಮಹಾನ್ ಸುಳ್ಳುಗಾರ, ಸೋಗಲಾಡಿ ಮುಖ್ಯಮಂತ್ರಿಯನ್ನು ನೋಡಿಲ್ಲ, ನೋಡಲೂ ಸಾಧ್ಯವಿಲ್ಲ. ಭ್ರಷ್ಟಾಚಾರದ ಆರೋಪ ಸಾಬೀತಾಗಿರುವ ಯಡಿಯೂರಪ್ಪ ಮ್ಯಾಜಿಸ್ಟ್ರೇಟ್ ಮುಂದೆ ಕೈಕಟ್ಟಿ ನಿಲ್ಲುವ ಸಮಯ ಬರಲಿದೆ. ಇಂಥ ದುರ್ಗತಿ ಯಾವ ಮುಖ್ಯಮಂತ್ರಿಗೂ ಬಂದಿರಲಿಲ್ಲ. ಇನ್ನಾದರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ಇಲ್ಲದಿದ್ದರೆ ಮಾನ ಮರ್ಯಾದೆ ಹರಾಜಾಗುತ್ತದೆ ಎಂದು ಸಿದ್ದರಾಮಯ್ಯ ಗುಡುಗಿದರು.

ಕಬ್ಬಿಣದ ಅದಿರನ್ನು ಸದ್ದಿಲ್ಲದೆ ಸಾಗಿಸಿದ ಯಡಿಯೂರಪ್ಪ 250 ಕೋಟಿ ರು. ಲೂಟಿ ಹೊಡೆದಿದ್ದಾರೆ. ಯು ಆರ್ ಅಕೌಂಟೆಬಲ್ ಯಡಿಯೂರಪ್ಪ ಎಂದು ಆಂಗ್ಲ ಭಾಷೆಯಲ್ಲಿ ವಾಗ್ದಾಳಿ ಮಾಡಿದ ಸಿದ್ದರಾಮಯ್ಯ, ಯಡಿಯೂರಪ್ಪನವರು ಅಧಿಕಾರ ಬಿಟ್ಟು ತೊಲಗಲೇಬೇಕು. ಇದಕ್ಕಾಗಿಯೇ ನಮ್ಮ ಹೋರಾಟ ಎಂದು ಸಿದ್ದರಾಮಯ್ಯ ನುಡಿದರು.

ಬಹುವಚನದಲ್ಲಿ ಮಾತಾಡಿ, ಮಾತಾಡಿ ಅಂತಾರೆ ಯಡಿಯೂರಪ್ಪ. ಏಕವಚನ ಬಿಟ್ಟು ಬಹುವಚನದಲ್ಲಿ, 'ಯಡಿಯೂರಪ್ಪನವರೆ, ನಿಮ್ಮ ಆರೋಪಗಳೆಲ್ಲ ಸಾಬೀತಾಗಿವೆ. ಇನ್ನಾದರೂ ಅಧಿಕಾರ ಬಿಟ್ಟು ಇಳಿಯಿರಿ' ಅಂದ್ರೆ ಇಳೀತಾರಾ? ಇಳಿಯಲ್ಲ, ಯಾವತ್ತಿಗೂ ಇಳಿಯಲ್ಲ. ಇಂಥ ಮಾನ, ಮರ್ಯಾದೆ ಇಲ್ಲದ ಮುಖ್ಯಮಂತ್ರಿಯನ್ನು ನಾವೆಂದೂ ನೋಡಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬಿಜೆಪಿ ಪರ, ಸಂಸದ ಅನಂತ ಕುಮಾರ್, ಇಂಧನ ಶೋಭಾ ಕರಂದ್ಲಾಜೆ, ಆರೋಗ್ಯ ಸಚಿವ ಶ್ರೀರಾಮುಲು ಭಾಷಣ ಬಿಗಿದರೆ, ಕಾಂಗ್ರೆಸ್ ಪರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರಪ್ಪ, ಸಂಸದ ಮುನಿಯಲ್ಲ, ಮಾಜಿ ಸಂಸದ ಜಾಫರ್ ಶರೀಫ್, ಸಂಸದ ಮಲ್ಲಿಕಾರ್ಜುನ ಖರ್ಗೆ ಭಾಷಣ ಕೊರೆದರು. ಸಿಎಂ ಇಬ್ರಾಹಿಂ ತಮ್ಮ ನೈಜ ಶೈಲಿಯಲ್ಲಿ ಮಾತಿನ ಹೊಳೆ ಹರಿಸಿ ಚಪ್ಪಾಳೆ ಗಿಟ್ಟಿಸಿದರು. ಎರಡೂ ಸಮಾವೇಶಗಳಿಗೆ ಹಾಜರಾಗಿದ್ದ ಸಾವಿರಾರು ಬೆಂಬಲಿಗರು ಬಿರುಬಿಸಿಲಿನಲ್ಲಿ ಜನಪ್ರತಿನಿಧಿಗಳು ಮಾತುಗಳನ್ನು ಕಿವಿಗೆ ಹಾಕಿಕೊಂಡು, ಊಟ ಮಾಡಿ ಜಾಗ ಖಾಲಿ ಮಾಡಿದರು.

ಈ ಸಮಾವೇಶಗಳಿಂದ ಏನು ಪ್ರಯೋಜನ? : ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲೆಂದು ಕಾಂಗ್ರೆಸ್, ವಿರೋಧ ಪಕ್ಷಗಳೇ ಇರಬಾರದೆಂಬಂತೆ ಮಾತನಾಡುವ ಬಿಜೆಪಿ, ಈ ಎರಡೂ ಪಕ್ಷಗಳನ್ನು ಸಂದರ್ಭ ಸಿಕ್ಕಾಗಲೆಲ್ಲ ಟೀಕಿಸುವ ಜೆಡಿಎಸ್ ನಡೆಸುವ ಈ ಸಮಾವೇಶಗಳಿಂದ ಪ್ರಯೋಜನವೇನಾದರೂ ಇದೆಯಾ? ಭಾಷಣ ಕೇಳಲು ಬಂದವರಿಗೆ ಕಿವಿತುಂಬ ಮಾತು ಮತ್ತು ಹೊಟ್ಟೆತುಂಬ ಊಟ, ಈ ಎರಡೂ ಬೇಡದವರಿಗೆ ಒಂದಿಷ್ಟು ಮನರಂಜನೆ ಮತ್ತು ಆ ದಾರಿಯಲ್ಲಿ ಓಡಾಡುವವರಿಗೆ ಒಂದಿಷ್ಟು ಟ್ರಾಫಿಕ್ ಜಾಮ್, ದಕ್ಕುವುದು ಇಷ್ಟೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+