ನಾದಿನಿ ಜೊತೆ ಸರಸ, ಪತ್ನಿಗೆ ತೋರಿಸಿದ ಕೈಲಾಸ

ಐದು ವರ್ಷಗಳ ಹಿಂದೆ ಕೊಪ್ಪದ ಅಮಿತ್ ನಾಯ್ಕ(26) ಗಡಿಬಿಡಿಕಲ್ಲಿನ ಸುಲೋಚನಾ(23) ಎಂಬಾಕೆಯನ್ನು ವಿವಾಹವಾಗಿದ್ದನು. ಅಮಿತ್ ನಾಯ್ಕ ಅತ್ತೆಯ ಮನೆಯಲ್ಲೇ ಮನೆಯಳಿಯನಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಆದರೆ, ಅಮಿತ್ ನಾಯ್ಕನ ಕಣ್ಣು ಅಪ್ರಾಪ್ತ ವಯಸ್ಸಿನ ನಾದಿನಿ ಸುಗುಣಳ ಮೇಲೆ ಬಿದ್ದಿದೆ. ನಾದಿನಿಯೊಂದಿಗಿನ ಸರಸ ಸುಲೋಚನಾ ಹಾಗೂ ಅಮಿತ್ ನಡುವಿನ ದಾಂಪತ್ಯ ವಿರಸಕ್ಕೆ ಕಾರಣವಾಗಿದೆ.
ಫೆಬ್ರವರಿ 8ರಂದು ಬೆಳ್ಳಂಬೆಳಿಗ್ಗೆ 9 ರ ವೇಳೆಗೆ ಇದೇ ವಿಷಯವಾಗಿ ಅಮಿತ್ ಹಾಗೂ ಸುಲೋಚನಾ ನಡುವೆ ಜಗಳ ಉಂಟಾಗಿದೆ. ಆ ವೇಳೆಗೆ ಸುಲೋಚನಾಳ ಕುತ್ತಿಗೆ ಹಿಸುಕಿ, ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ಸ್ಥಳದಲ್ಲಿ ಕುಸಿದು ಬಿದ್ದಿದ್ದ ಆಕೆಯನ್ನು ಸುಮಾರು ಅರ್ಧ ಗಂಟೆಯ ಬಳಿಕ ಹೆಗಲ ಮೇಲೆ ಹಾಕಿಕೊಂಡು ಹೋಗಿ ಮನೆಯ ಮುಂಭಾಗದ ಬಾವಿಗೆ ಬೀಸಾಡಿದ್ದಾನೆ.
ಈ ಎಲ್ಲಾ ಘೋರ ದೃಶ್ಯಕ್ಕೆ ಮನೆಯಲ್ಲಿದ್ದ ತಾಯಿ ಗುಲಾಬಿ ಹಾಗೂ ನಾದಿನಿ ಸುಗುಣ ಸಾಕ್ಷಿಯಾಗಿದ್ದಾರೆ. ಆದರೆ, ಅವರು ಪೊಲೀಸರಿಗೆ ಮಾಹಿತಿ ನೀಡದೇ ಸಾಕ್ಷ್ಯವನ್ನು ನಾಶಪಡಿಸಲು ಮುಂದಾಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಅಮಿತ್, ಅತ್ತೆ ಮನೆ ಮಂದಿಗೆ ಜೀವಬೆದರಿಕೆಯೊಡ್ಡಿ ಸತ್ಯಾಂಶವನ್ನು ಬಯಲುಗೊಳಿಸಿದರೆ ಸುಮ್ಮನೆ ಬಿಡಲಾರೆ ಎಂದು ಎಚ್ಚರಿಸಿರುವುದು ತಿಳಿದು ಬಂದಿದೆ.
ಎಸ್ಕೇಪ್ ಪ್ಲ್ಯಾನ್ ವಿಫಲ : ಇವರ ಮಾತು ನಂಬುವ ಸ್ಥಿತಿಯಲ್ಲಿ ಪೊಲೀಸರು ಇರಲಿಲ್ಲ. ಈ ಘಟನೆ ನಡೆದು ಸರಿ ಸುಮಾರು ನಾಲ್ಕು ದಿನ ಕಳೆಯುತ್ತಿದ್ದಂತೆ ತಡರಾತ್ರಿಯಲ್ಲಿ ಆರೋಪಿ ಅಮಿತ್ ನಾಯ್ಕ ಹಾಗೂ ಸುಲೋಚನಾಳ ತಂಗಿ ಸುಗುಣಾ ಶಂಕರನಾರಾಯಣ ಪೊಲೀಸರ ಬಲೆಗೆ ಸಿಕ್ಕು, ಅನುಮಾನಸ್ಪದ ರೀತಿಯಲ್ಲಿ ವರ್ತಿಸತೊಡಗಿದ್ದಾರೆ.
ಮೊದಲಿಗೆ ಇವರು ನಕ್ಸಲರೆಂದು ಶಂಕಿಸಿ ಠಾಣೆಗೆ ಕರೆದೊಯ್ದು ವಿಚಾರಿಸಿದಾಗಲೇ ಕೊಲೆ ಪ್ರಕರಣದ ಪೂರ್ಣ ಸತ್ಯಾಂಶ ಹೊರಬಿದ್ದಿದೆ. ಅಪ್ರಾಪ್ತ ವಯಸ್ಸಿನ ಸುಗುಣಳೊಂದಿಗೆ ವಿವಾಹವಾಗಲು ಅಮಿತ್ ಭದ್ರಾವತಿಗೆ ಕರೆದೊಯ್ಯಲು ತಯಾರಿ ನಡೆಸಿ ವಿಫಲನಾಗಿದ್ದನು. ಘಟನೆ ಹೆಬ್ರಿ ಠಾಣಾ ಸರಹದ್ದಿನಲ್ಲಿ ನಡೆದಿರುವುದರಿಂದ ಮೇಲಧಿಕಾರಿಯ ಆದೇಶದಂತೆ ಆರೋಪಿ ಹಾಗೂ ಆತನ ನಾದಿನಿಯನ್ನು ಹೆಬ್ರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.












Click it and Unblock the Notifications