ಸಂತೋಷದಿಂದ ಹೆಗಡೆ ಕೈಕುಲುಕಿದ ಯಡಿಯೂರಪ್ಪ

ಟಿವಿ ಸುದ್ದಿ ವಾಹಿನಿ ಎನ್ ಡಿ ಟಿ ವಿ ನೀಡಿರುವ 'ವರ್ಷದ ವ್ಯಕ್ತಿ' ಪ್ರಶಸ್ತಿಗೆ ಪಾತ್ರರಾಗಿರುವ ಸಂತೋಷ್ ಹೆಗಡೆ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದಿಸಿದರು. ಈ ಸಂದರ್ಭದಲ್ಲಿ ನವದೆಹಲಿಯಲ್ಲಿ ಕರ್ನಾಟಕ ಬಿಜೆಪಿಯ ಪ್ರತಿನಿಧಿಯಾಗಿರುವ ಧನಂಜಯ ಕುಮಾರ್ ಉಪಸ್ಥಿತರಿದ್ದರು.
ಈ ಭೇಟಿ ಸೌಜನ್ಯದ ಭೇಟಿಯಾಗಿದ್ದು, ಇದರಲ್ಲಿ ಯಾವುದೇ ರಾಜಕೀಯದ ಉದ್ದೇಶವಿಲ್ಲ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು. ಕರ್ನಾಟಕ ಹೈಕೋರ್ಟಿನಲ್ಲಿ ಅನರ್ಹರಾಗಿದ್ದ ಪಕ್ಷೇತರ ಸಚಿವರೂ ಸೋಲು ಕಂಡಿದ್ದರಿಂದ ನಿರಾಳರಾಗಿದ್ದ ಯಡಿಯೂರಪ್ಪನವರು, ತಮ್ಮ ಪದಚ್ಯುತಿಗೆ ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರ ಜಾತಕಗಳನ್ನು ಬಿಚ್ಚಿಡುವುದಾಗಿ ಹೇಳಿದರು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಯಡಿಯೂರಪ್ಪ ಮತ್ತು ನ್ಯಾ. ಸಂತೋಷ್ ಹೆಗಡೆ ನಡುವೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಕಾದಾಟ ನಡೆದೇ ಇದೆ. ಇದರಿಂದ ಬೇಸತ್ತು ಹೆಗಡೆ ರಾಜೀನಾಮೆ ಕೂಡ ನೀಡಿದ್ದರು. ಆದರೆ, ಎಲ್ ಕೆ ಅಡ್ವಾಣಿ ಅವರ ಮನವೊಲಿಕೆಯಿಂದ ಮತ್ತೆ ಪದಗ್ರಹಣ ಮಾಡಿದ್ದರು. ಭೂ ಹಗರಣದ ತನಿಖೆ ಲೋಕಾಯುಕ್ತರಿಗೆ ನೀಡುವ ಬದಲು ನ್ಯಾ.ಪದ್ಮರಾಜ್ ಆಯೋಗಕ್ಕೆ ನೀಡಿದ್ದು ಕೂಡ ಸಂತೋಷ್ ಹೆಗಡೆ ಅವರು ಅಸಮಾಧಾನಕ್ಕೆ ಕಾರಣವಾಗಿತ್ತು.
ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ತನಿಖೆ ನಡೆಸಿರುವ ಸಂತೋಷ್ ಹೆಗಡೆ ಮಾರ್ಚ್ 31ರೊಳಗೆ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ. ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಅವರು ನಿವೃತ್ತರಾಗುತ್ತಿದ್ದು, ನಂತರ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications