ಕೇಂದ್ರದ ಅಂಕಿತಕ್ಕೆ ಕಾದಿರುವ ಚಿತ್ರದುರ್ಗ ರೈಲು

ಈ ಸಂಬಂಧ ಚಿತ್ರದುರ್ಗದ ಯುವ ಸಂಸತ್ ಸದಸ್ಯರಾದ ಜನಾರ್ದನ ಸ್ವಾಮಿ ಮತ್ತು ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಭೇಟಿ ಮಾಡಿ, ಯೋಜನೆಯ ಪ್ರಗತಿ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದರು.
ಒಟ್ಟು 903 ಕೋಟಿ ರೂ. ಯೋಜನೆ ಇದಾಗಿದ್ದು, ಯೋಜನೆಗೆ ಅಗತ್ಯವಿರುವ ಅಷ್ಟೂ ಮೊತ್ತವನ್ನು ರೈಲ್ವೆ ಇಲಾಖೆ ಹೊರಲು ಸಿದ್ಧವಿಲ್ಲ ಎಂಬ ಸಿಗ್ನಲ್ ಬಂದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರು ಮಾತನಾಡದೆ ಈ ಭಾಗದ ಜನರ ಹಿತಾಸಕ್ತಿಯನ್ನು ಕಾಪಾಡಲು ಅರ್ಧದಷ್ಟು ಹಣವನ್ನು ರಾಜ್ಯವೇ ಭರಿಸಲಿದೆ ಎಂದು ಹೇಳಿದರು. ಮಾತಿಗೆ ತಕ್ಕಂತೆ ಒಂದು ವರ್ಷದ ಹಿಂದೆಯೇ ಹಣ ಬಿಡುಗಡೆಯೂ ಮಾಡಿದ್ದಾರೆ.
ದಾಖಲಾರ್ಹ ಸಂಗತಿಯೆಂದರೆ, ಯೋಜನಾ ಆಯೋಗದ ಅನುಮೋದನೆಯೂ ಈಗಾಗಲೇ ದೊರೆತಿದೆ. ಜತೆಗೆ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ಕೇಂದ್ರ ಸರಕಾರದ ಈ ಯೋಜನೆಗೆ ನೀಡಲು ರಾಜ್ಯ ಸರಕಾರ ಅಂಕಿತ ಹಾಕಿದೆ. ಅರ್ಧದಷ್ಟು ಹಣವೂ ಯೋಜನೆಗಾಗಿ ಮೀಸಲಾಗಿದೆ. ಇನ್ನು ವಿಳಂವಾದರೂ ಏಕೆ ಎಂದು ಮೂವರೂ ಸಂಸದರು ಯೋಜನೆಗಾಗಿ ದಿಲ್ಲಿ ರೈಲು ಹತ್ತಿದ್ದಾರೆ.
ಇದೀಗ, ಭೂ ಸ್ವಾಧೀನ ಪ್ರಕ್ರಿಯೆ ತನ್ಮೂಲಕ ಯೋಜನೆ ಕಾಮಗಾರಿ ಆರಂಭಕ್ಕೆ ಕೇಂದ್ರ ಸಚಿವ ಸಂಪುಟ ಅಂಕಿತ ಹಾಕುವುದೊಂದೇ ಬಾಕಿ. ಯೋಜನೆಯ ಬಗ್ಗೆ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ಯಡಿಯೂರಪ್ಪ ಅವರಿಗೆ ಶಹಬ್ಬಾಸ್‌ಗಿರಿಯನ್ನೂ ನೀಡಿದ್ದಾರೆ. ಆದ್ದರಿಂದ ಇನ್ನೇನು ಕೆಲವೇ ದಿನಗಳಲ್ಲಿ ರೈಲ್ವೆ ಬಜೆಟ್ ಮಂಡನೆಯಾಗಲಿದ್ದು, ಸಚಿವೆ ಬ್ಯಾನರ್ಜಿ ಈ ಯೋಜನೆ ಬಗ್ಗೆ ಹೆಚ್ಚಿನ ಮಮತೆ ತೋರಲಿ ಎಂದು ಚಿತ್ರದುರ್ಗದ ಭಾಗದ ಜನತೆ ಆಶಿಸಿದ್ದಾರೆ.












Click it and Unblock the Notifications