ಆರು ಹೆಂಡಿರ ನಕಲಿ ಜ್ಯೋತಿಷಿಯ ಬಂಧನ

ತನ್ನ ಪತ್ನಿಯರನ್ನೆಲ್ಲ ಸುಸೂತ್ರವಾಗಿ ನಿಭಾಯಿಸಲು ಇವನು ಆಯ್ದುಕೊಂಡ ಉದ್ಯೋಗ ಜ್ಯೋತಿಷ್ಯ ಹೇಳುವುದು ಹಾಗೂ ಕುದುರೆ ಜೂಜು. ಇವನ ಭವಿಷ್ಯವೆಂದರೆ ಅದು ಬರೀ ಸುಳ್ಳಿಕ ಕಂತೆ. ಕೊನೆಗೆ ಹೀಗೆ ಸುಳ್ಳು ಹೇಳುವಾಗಲೇ ಪೊಲೀಸರಿಗೆ ಅತಿಥಿಯಾಗಿದ್ದಾನೆ. ನಗರದ ಚಾಮರಾಜಪೇಟೆ ಠಾಣೆ ಪೊಲೀಸರು ಇವನನ್ನು ಬುಧವಾರ ಬಂಧಿಸಿದ್ದಾರೆ. ಆ ಸಂದರ್ಭದಲ್ಲಿ ಇವನ ರಾಸಲೀಲೆಗಳು ಪ್ರಕಾಶಮಾನವಾಗಿವೆ.
ಲಕ್ಷ್ಮಿ ಸೆರೆ ಮಾಲೆ: ಚಾಮರಾಜಪೇಟೆ 2ನೇ ಮುಖ್ಯರಸ್ತೆ 9ನೇ ಕ್ರಾಸ್‌ನ ಇಂದಿರಾ ಎಂಟರ್‌ಪ್ರೈಸಸ್ ಬಳಿಯಿರುವ ಮಧುಸೂಧನ ಎಂಬುವರ ಪರಿಚಯ ಮಾಡಿಕೊಂಡ ನಿತ್ಯಾನಂದ, ನಿಮ್ಮ ಮನೆಯಲ್ಲಿ ಹಣಕಾಸು ತೊಂದರೆ ಇದೆ. ಇದನ್ನು ನಿವಾರಿಸಿಕೊಳ್ಳಲು ಲಕ್ಷ್ಮಿ ಸ್ವರಮಾಲೆಪೂಜೆ ಮಾಡಿಸಬೇಕು ಎಂದು ಬೋಧಿಸಿದ.
ಅವರ ವಿಶ್ವಾಸ ಗಳಿಸಿದ ನಂತರ ತನಗೆ ಕಪ್ಪು ಹಣ ಇರುವವರ ಪರಿಚಯವಿದೆ. ಅವರಿಂದ ಕಡಿಮೆ ಬಡ್ಡಿಗೆ 20 ಲಕ್ಷ ರು. ಸಾಲ ಕೊಡಿಸುವುದಾಗಿ ನಂಬಿಸಿ 3.40 ಲಕ್ಷ ರು ಪಡೆದುಕೊಂಡು ವಂಚಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಚಾಮರಾಜಪೇಟೆ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ. ರತ್ನಾಕರ್ ನೇತೃತ್ವದ ತಂಡ ನಿತ್ಯಾನಂದನನ್ನು ಬಂಧಿಸಿದೆ.
ಸುಗಮ ಸಂಸಾರಕ್ಕೆ 1760 ಮಾತ್ರೆ: ತನಿಖೆ ಸಂದರ್ಭದಲ್ಲಿ ಈತ ಮಂಗಳೂರಿನ ವಾಸಂತಿ, ಶಕೀಲಾ, ಕಾಸರಗೋಡಿನ ಕೋಮಲೆ, ಚಾರ್ಮಾಡಿಯ ಸುಂದರಿ, ಬೆಂಗಳೂರಿನ ಜಯಂತಿ ಹಾಗೂ ಮೈಸೂರಿನ ಪವಿತ್ರ ಎಂಬುವವರನ್ನು ಮದುವೆಯಾಗಿದ್ದು ಬೆಳಕಿಗೆ ಬಂದಿದೆ. ಎಲ್ಲ ಪತ್ನಿಯರ ಜತೆ ಅನ್ಯೋನ್ಯ ಸಂಬಂಧಕ್ಕೆ ತನ್ನ ಗುರುಗಳು ನೀಡಿದ 'ಸುಗಮ ಸಂಸಾರಕ್ಕೆ 1760' ಎಂಬ ಮಾತ್ರೆಯೇ ಕಾರಣ ಎಂದು ನಿತ್ಯಾನಂದ ಪೊಲೀಸರಿಗೆ ತಿಳಿಸಿದ್ದಾನೆ.
ಹಣ ದ್ವಿಗುಣ ಮಾಡುವುದಾಗಿ 50ಕ್ಕೂ ಹೆಚ್ಚು ಜನರನ್ನು ನಂಬಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಈ ರೀತಿ ಗಳಿಸಿದ ಹಣವನ್ನು ಈತ ಕುದುರೆ ಜೂಜಿನಲ್ಲಿ ವಿನಿಯೋಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications