ಏರೋ ಪ್ರದರ್ಶನ, ಕರ್ನಾಟಕಕ್ಕೆ ಏನು ಪ್ರಯೋಜನ?

ಮೇಲೆ ನೋಡು ಅಣ್ಣ: ಬೆಂಗಳೂರಿನವರಿಗೆ, ಕರ್ನಾಟಕದ ಜನರಿಗೆ ಇದು ಹತ್ತಿರದಿಂದ ಯುದ್ಧ ವಿಮಾನಗಳ ಕಸರತ್ತನ್ನು ಕಣ್ತುಂಬಿಕೊಳ್ಳಲು ಅವಕಾಶವಾಗಿದೆ. ಟಿಕೇಟ್ ಖರೀದಿಸಿದವರು, ಆಕಾಶ ನೋಡೋಕೆ ಟಿಕೇಟ್ಯಾಕೆ ಅಂತ ಯಲಹಂಕದ ಆಸುಪಾಸಿನಲ್ಲಿ, ಕಟ್ಟಡದ ಮೇಲೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದು ನಮಗೆ ದೊರಕಿದ ಅವಕಾಶವಲ್ಲವೇ?
ಕೋಟಿ ಕೋಟಿ ಹೂಡಿಕೆ: ಹಣಕಾಸು ಲಾಭ ಲೆಕ್ಕ ಹಾಕ ಹೊರಟರೆ ಮೊದಲ ದಿನವೇ ಕರ್ನಾಟಕಕ್ಕೆ ಹೂಡಿಕೆಯ ದೀಪಾವಳಿ. ಮೊದಲ ದಿನವೇ ನಮ್ಮ ರಾಜ್ಯಕ್ಕೆ ಸುಮಾರು 1 ಸಾವಿರ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿರುವ ಏರೋಸ್ಪೇಸ್ ಪಾರ್ಕ್ ನಲ್ಲಿ ಕೈಗಾರಿಕೆ ಸ್ಥಾಪಿಸಲು ಜಗತ್ತಿನ ಅತಿರಥ ಕಂಪನಿಗಳು ಬಂದಿವೆ.
ಇದರಲ್ಲಿ ಇಂಗ್ಲೆಂಡ್ ನ ರೋಲ್ಸ್ ರಾಯ್, ಟೈಸನಾರ್ಟ್, ಫ್ರಾನ್ಸ್ ನ ರೆಸಾರ್ಟ್ ಏವಿಯೇಷನ್, ಅಮೆರಿಕದ ಹನಿವೆಲ್, ಸಾಪ್, ಬೋಯಿಂಗ್, ಲಾಕಿನ್ ಮಾರ್ಟಿನ್, ಬೆಲ್ಜಿಯಂನ ಏರೋಸ್ಪೇಸ್ ಮುಂತಾದ ಕಂಪನಿಗಳು ಹೂಡಿಕೆಗೆ ಒಪ್ಪಿವೆ. ಹೀಗೆ ಮೊದಲ ದಿನವೇ ಬಂದ ಹೂಡಿಕೆಯ ಮೊತ್ತ ಸುಮಾರು 1 ಸಾವಿರ ಕೋಟಿ ರೂಪಾಯಿ.
ಉಕ್ಕಿನ ಹಕ್ಕಿಗಳ ಕಸರತ್ತು: ನಿನ್ನೆಯಿಂದ ಆರಂಭವಾದ ಉಕ್ಕಿನ ಹಕ್ಕಿಗಳ ಕಸರತ್ತು ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಸೂರ್ಯ ಕಿರಣ್ ಹೊರಸೂಸಿದ ತ್ರಿವರ್ಣ ಬಣ್ಣ, ವೇಗದ ಆವೇಗದ ಡಾರ್ನಿಯರ್, ಐಜೆಟಿ, ಜಾಗ್ವರ್, ಸುಖೋಯ್ ವೇಗಕ್ಕೆ ಬಾನಿಗೂ ಕಂಪನ ಹುಟ್ಟಿದ್ದರೆ ಆಶ್ಚರ್ಯವಿಲ್ಲ. ಎಚ್ಎಎಲ್ ನ ತೇಜಸ್ ಮೋಡಿ ಮರೆಯುವಂತದ್ದಲ್ಲ. ಅಬ್ಬಾ ಎಷ್ಟೊಂದು ವಿಮಾನಗಳು. ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ಲೆಕ್ಕ ಮಾಡೋದೇ ಕಷ್ಟ. ಹಾರ್ನೆಟ್, ಟೈಫೋನ್, ಗ್ರಿಪನ, ಚೀತಾ ಎಷ್ಟೊಂದು ಹೆಸರುಗಳು.
ಮಾರುತಿ ಕಾರ್ ಹಾರಬಹುದೇ?: ಏರ್ ಶೋ ಅಂಗಳದಲ್ಲಿ ನಿಲ್ಲಿಸಿರುವ ಮಾರುತಿ 800 ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ. ಅದಕ್ಕೆ ವಿಮಾನದ ರೆಕ್ಕೆಗಳನ್ನು ಜೋಡಿಸಲಾಗಿತ್ತು. ಇಂತದೊಂದು ಆವಿಷ್ಕಾರಕ್ಕೆ ಕೈಹಾಕಿದ್ದು ಬೆಂಗಳೂರಿಯನ್ ಸಂಸ್ಥೆ. ಮಹೀಂದ್ರ ಕಂಪನಿಗೆ ಇಂತದೊಂದು ಆವಿಷ್ಕಾರ ಮಾಡಲು ರಕ್ಷಣಾ ಇಲಾಖೆ ಅನುಮತಿ ನೀಡಿದೆ ಎನ್ನಲಾಗಿದೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆದರೆ ಕಾರ್ ಗಳೆಲ್ಲ ಆಕಾಶ ಮಾರ್ಗದಲ್ಲಿ ಚಲಿಸುವ ದಿನ ದೂರ ಇಲ್ಲ ಅಂತೀರಾ?
ಎನಿವೇ ಹಾರುವ ಉಕ್ಕಿನ ಹಕ್ಕಿಗಳನ್ನು ಬಣ್ಣಿಸುವುದಕ್ಕಿಂತ ನೀವೊಮ್ಮೆ ಅಲ್ಲಿಗೆ ಹೋಗಿ ನೋಡಬೇಕು. ನಾಡಿದ್ದು ಭಾನುವಾರವರೆಗೆ ಅವಕಾಶವಿದೆ. ಸ್ವಲ್ಪ ಟೈಂ ಹೊಂದಿಸಿಕೊಂಡು ಹೊರಡಿ. ಮಿಸ್ ಮಾಡಿಕೊಳ್ಳಬೇಡಿ.












Click it and Unblock the Notifications