ಹೆತ್ತಮ್ಮನಿಗೇ ಬೇಡವಾಯಿತೆ ಈ ಗಂಡು ಹಸುಳೆ!

ಆದರೆ ತಂದೆ- ತಾಯಿಗೆ ಬೇಡವಾದ ಮಗುವೀಗ ಕುದೂರು ಆಸ್ಪತ್ರೆಯಲ್ಲಿ ಜನರ ಆರೈಕೆಯಲ್ಲಿ ನೆಮ್ಮದಿಯಾಗಿದೆ. ಗಂಡು ಮಗುವಾಗಿರುವುದಕ್ಕೋ ಏನೋ ಮಗುವನ್ನು ಸಲಹಲು ನಾಮುಂದು ತಾಮುಂದು ಎಂದು ಪೈಪೋಟಿ ನಡೆಯುತ್ತಿದೆ.
ಮುದ್ದಾದ ಮಗುವನ್ನ ನೋಡಿದರೆ ಯಾರಿಗೇ ಅದ್ರು ಒಂದು ಸಲ ಎತ್ತಿ ಮುದ್ದಾಡಬೇಕು ಅನ್ಸುತ್ತೆ. ನಮಗೂ ಇಂಥ ಮುದ್ದಾದ ಮಗು ಇರ್‍ಬೇಕು, ಕಣ್ಣೆದುರೇ ಆಡಿ ನಲಿಯುತ್ತಿರಬೇಕು ಅಂತ ಯಾವ ತಾಯಿಗಾದ್ರೂ ಅನ್ಸೇ ಅನ್ಸುತ್ತೆ. ತಮ್ಮ ಮಗುವಿಗೆ ಏನಾದ್ರು ಆದ್ರೆ ತನಗೇ ಏನೋ ಆಯಿತು ಅನ್ನೋ ಹಾಗೆ ಹೆತ್ತಕರುಳು ಸಂಕಟ ಪಡುತ್ತದೆ. ಆದರೆ ಈ ಮಗುವನ್ನು ಹೆತ್ತ ತಾಯಿಗೆ ಈ ಮಗು ಯಾಕೋ ಬೇಡವಾಯಿತು? ಅನ್ನುವುದೇ ಸದ್ಯದ ಪ್ರಶ್ನೆ.
ಹಾಲುಗಲ್ಲದ ಮೂರು ದಿನದ ಮಗುವನ್ನು ಹೆತ್ತಮ್ಮ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ತಿಪ್ಪಸಂದ್ರ ಗ್ರಾಮದ ಮಸೀದಿ ಪಕ್ಕದ ಸ್ಮಶಾನದಲ್ಲಿ ಬಿಟ್ಟು ಹೋಗಿದ್ದಾಳೆ. ಅಪ್ಪ ಅಮ್ಮನ ತೋಳ್ತೆಕ್ಕೆಯಲ್ಲಿ ಬೆಳೆಯಬೇಕಾದ ಈ ಮಗು ಹುಟ್ಟಿದಾಕ್ಷಣವೇ ಅನಾಥವಾಗಿದೆ. ಬೆಳ್ಳಂ ಬೆಳಗ್ಗೆಯೇ ತಿಪ್ಪಸಂದ್ರದ ಗ್ರಾಮಸ್ಥರು ಮಸೀದಿ ಪಕ್ಕ ಅನಾಥವಾಗಿ ಮಲಗಿದ್ದ ಈಮಗುವನ್ನು ನೋಡಿದ್ದಾರೆ. ನಂತರ ಕರ್ನಾಟಕ ರಕ್ಷಣಾ ಪಡೆಯ ಕಾರ್ಯಕರ್ತರೊಂದಿಗೆ ಕುದೂರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ತಂದು ಚಿಕಿತ್ಸೆ ಕೊಡಿಸಲಾಗಿದೆ. ಮಗು ಈಗ ಆರೋಗ್ಯವಾಗಿದೆ.
ಈ ಮಗು ಮಸೀದಿ ಬಳಿ ಸಿಕ್ಕಿದ್ದರಿಂದ ಒಂದು ಕೋಮಿನ ಮಹಿಳೆ ಮಗು ತಮಗೆ ಬೇಕೆಂದು ಕೇಳಿದ್ದಾರೆ. ಆದರೆ ಮಗುವನ್ನು ಆರೈಕೆ ಮಾಡುತ್ತಿದ್ದವರು ನೀಡಲು ನಿರಾಕರಿಸಿದ್ದಾರೆ. ನಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ ನಂತರ ಆಸ್ಪತ್ರೆಯಲ್ಲಿ ಮಗು ಆರೈಕೆ ಪಡೆಯುತ್ತಿದೆ. ಉತ್ತಮ ವ್ಯಕ್ತಿಗಳಿಗೆ ಮಗುವನ್ನು ನೀಡಿ ಪೋಷಣೆ ಮಾಡಿಸಬೇಕೆಂದು ಗ್ರಾಮಸ್ಥರೆಲ್ಲರೂ ಅಂತಿಮ ತೀರ್ಮಾನ ಮಾಡಿದ್ದಾರೆ.
ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಬೇಕಿದ್ದ ಈ ಮಗು ಈಗ ಆಸ್ಪತ್ರೆಯ ಹಾಸಿಗೆಯ ಮೇಲೆ ಪವಡಿಸುವಂತಾಗಿದೆ. ಒಂದು ಅನಾಥ ಮಗುವಿನ ಮೇಲೆ ಕುದೂರು ಜನರು ಹಾಗು ಕರ್ನಾಟಕ ರಕ್ಷಣಾ ಪಡೆಯ ಕಾರ್ಯಕರ್ತರು ತೋರಿಸರುವ ಪ್ರೀತಿ ನಿಜಕ್ಕೂ ಶ್ಲಾಘನೀಯ. ಈಗ ಮಗುವನ್ನು ಸೋಲೂರಿನ ಸ್ನೇಹಾಲಯ ಆಸ್ಪತ್ರಗೆ ನೀಡಲಾಗಿದೆ. ಒಟ್ಟಿನಲ್ಲಿ ಈಗ ಕಣ್ತೆರೆಯುತ್ತಿರುವ ಮಗು ಅನಾಥವಾಗದೆ ತಂದೆ-ತಾಯಿಯ ಪ್ರೀತಿ ಸಿಗಲಿ ಎಂಬುದೇ ಎಲ್ಲರ ಆಶಯವಾಗಿದೆ.












Click it and Unblock the Notifications