ಮಾಲೇಗಾಂವ್ ಸ್ಫೋಟ : ಗೋಕಾಕ ವ್ಯಕ್ತಿ ಬಂಧನ

ಪ್ರವೀಣ ವೆಂಕಟೇಶ್ ಟಕ್ಕಳಕಿ(32) ಬಂಧಿತ ಆರೋಪಿ. ಸೋಮವಾರ ರಾತ್ರಿ ಬಂಧಿಸಿ ಭಯೋತ್ಪಾದನೆಗೆ ಸಂಬಂಧಿಸಿದ ವಿಶೇಷ ಮೋಕಾ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯ ಫೆ.14ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ರಾಮ್ ಜೀ ಕಾಲಸಂಗ್ರ ಮತ್ತು ಸಂದೀಪ ದಾಂಗೆ ಎಂಬಿಬ್ಬರು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಂಬಂಧಿ ಎನ್ನಲಾಗಿದ್ದು, ಆ ಬಗ್ಗೆ ತನಿಖೆ ಶುರುವಾಗಿದೆ ಎಂದು ಬೆಳಗಾವಿ ಎಸ್ಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಮಾಲೇಗಾಂವ್ ಸ್ಫೋಟದ ಪ್ರಮುಖ ಎಂದು ಹೇಳಲಾಗಿರುವ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರ ಸಹಾಯಕನಾಗಿ ಪ್ರವೀಣ ಕೆಲಸ ಮಾಡಿದ್ದ. ಹಿಂದೂ ರಾಷ್ಟ್ರ ನಿರ್ಮಾಣ ಇವರ ಏಕೈಕ ಉದ್ದೇಶವಾಗಿತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದ ಪೊಲೀಸರು 2009ರ ಜನವರಿ 9ರಂದು ಮೋಕಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ದೋಷಾರೋಪ ಪಟ್ಟಿಯಲ್ಲಿ ರಾಮ್ ಜೀ ಕಾಲಸಂಗ್ರ, ಸಂದೀಪ್ ಪಾಟೀಲ್ ಮತ್ತು ಪ್ರವೀಣ ಟಕ್ಕಳಕಿ(ಮುತಾಲಿಕ್) ಆರೋಪಿಗಳು ಎಂದು ಹೆಸರಿಸಲಾಗಿತ್ತು. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಮೋಕಾ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು. ಸಾಧ್ವಿ ಪ್ರಗ್ಯಾಸಿಂಗ್, ಪ್ರಸಾದ್ ಶ್ರೀಕಾಂತ್ ಪುರೋಹಿತ್ ಮತ್ತು ಅಭಿನವ್ ಭರತ್ ಅವರು ಘಟನೆಯ ರೂವಾರಿಗಳೆಂದು ಎಟಿಎಸ್ ಮೊಕದ್ದಮೆ ದಾಖಲಿಸಿದೆ. 2008ರ ಸೆಪ್ಟೆಂಬರ್ ನಲ್ಲಿ ಮಾಲೇಗಾಂವ್ ಸ್ಫೋಟ ಸಂಭವಿಸಿತ್ತು.












Click it and Unblock the Notifications