ಸಿಎಂ ಯಡಿಯೂರಪ್ಪ ರಣಹೇಡಿ : ರೇವಣ್ಣ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ, ಭೂಹಗರಣದ ಬಗ್ಗೆ ಚರ್ಚೆ ನಡೆಸದೆ ಮುಖ್ಯಮಂತ್ರಿ ರಣಹೇಡಿಯಂತೆ ಪಲಾಯನ ಮಾಡಿದ್ದಾರೆ ಎಂದರು. ಅಧಿವೇಶನಕ್ಕೆ ದಾಖಲೆ ಸಮೇತ ಬನ್ನಿ ಎಂದು ಕರೆ ನೀಡಿದ್ದ ಮುಖ್ಯಮಂತ್ರಿ ಆನಂತರ ಸದನದಲ್ಲಿ ಯಾವುದೇ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ಮಾಡಿಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿವೇಶನದಲ್ಲಿ ಚರ್ಚೆ ನಡೆಸುವ ಬದಲು ಪ್ರತಿಪಕ್ಷಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹಾಗೂ ದರ್ಪ ನಡೆಸುತ್ತಿದ್ದಾರೆ. ಇದೀಗ ವಿರೋಧಪಕ್ಷಗಳನ್ನು ಮಟ್ಟಹಾಕಲು ಶಾಸಕರನ್ನು ಅಮಾನತು ಮಾಡುವ ಬೆದರಿಕೆ ಒಡ್ಡುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ ಎಂದು ರೇವಣ್ಣ ಹೇಳಿದರು.
ವಿಧಾನಸೌಧದಲ್ಲಿ ಶಾಸಕಾಂಗ ಸಭೆ ನಡೆಸಿದ ಜೆಡಿಎಸ್ ಶಾಸಕರು ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಸರಕಾರ ವಜಾಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದರು.












Click it and Unblock the Notifications