ಸೂರಿ ಹಂತಕರು ಬೆಂಗಳೂರಿನಲ್ಲಿ ಸೆರೆ

ಸೂರಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಸೂರಿಯ ಸಹಚರರೇ ಆಗಿದ್ದ ನಾಲ್ಕು ಮಂದಿಯನ್ನು ಹೈದರಾಬಾದ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈ ವೇಳೆ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಅಮೃತನಗರ 3ನೇ ಕ್ರಾಸ್ ಮನೆಯೊಂದರಲ್ಲಿ ನೆಲೆಸಿದ್ದ ಭಾನುಪ್ರಕಾಶ್ ಹಾಗೂ ಆತನ ಮೂರು ಮಂದಿ ಸಹಚರರನ್ನು ಯಲಹಂಕ ಹೊರವರ್ತುಲ ರಸ್ತೆಯಲ್ಲಿ ಬಂಧಿಸಲಾಗಿದೆ. ಮಧು ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬೆಂಗಳೂರಿನ ಅಮೃತನಗರದಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ತಿಳಿದ ಹೈದರಾಬಾದ್ ಪೊಲೀಸರು ವಾರದ ಹಿಂದೆಯೇ ಆಗಮಿಸಿ ಬೆಂಗಳೂರಿನಲ್ಲಿ ತಂಗಿದ್ದರು. ಆರೋಪಿಗಳ ಚಲನವಲನ ಗಮನಿಸಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಶನಿವಾರ ರಿಂಗ್ ರಸ್ತೆ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದರಾದರೂ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.
ಡಾನ್ ಸೂರಿ ಹಂತಕರನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಆಂಧ್ರಪ್ರದೇಶ ಪೊಲೀಸರು ಈ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ. ಹಾಗಾಗಿ ನಾವು ಏನನ್ನೂ ಹೇಳುವುದಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದ್ದಾರೆ.












Click it and Unblock the Notifications