ಸಿಇಸಿ ವರದಿ ಹಿಂದೆ ಹಣದ ಪ್ರಭಾವ : ಜನಾರ್ದನ ರೆಡ್ಡಿ

ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಶುಕ್ರವಾರ ಮಧ್ಯಾಹ್ನ ವರದಿ ಸಲ್ಲಿಸಿದ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟ ಆಗುತ್ತಿದ್ದಂತೆಯೇ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ತುರ್ತಾಗಿ ಬಳ್ಳಾರಿಗೆ ಆಗಮಿಸಿದ ಜಿ. ಜನಾರ್ದನರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡಿದರು. ಸಿಇಸಿ ಸಲ್ಲಿಸಿರುವ ವರದಿ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿದವರನ್ನು ನೇಣಿಗೆ ಏರಿಸಿದಂತಾಗಿದೆ ಎಂದು ವ್ಯಂಗ್ಯವಾಡಿದರು. ಗಣಿ ಗುತ್ತಿಗಾರಿಕೆಯನ್ನು ರದ್ದುಪಡಿಸಬೇಕೆಂದು ನೀಡಿರುವ ವರದಿಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ದೆಹಲಿಯಲ್ಲಿ ಕೂತು ವರದಿ : ಸರ್ವೆ ಆಫ್ ಇಂಡಿಯಾ ಸುಪ್ರೀಂ ಕೋರ್ಟ್‌ಗೆ ಈಗಾಗಲೇ 4 ವರದಿಗಳನ್ನು ಸಲ್ಲಿಸಿದೆ. ಈ ನಾಲ್ಕು ವರದಿಗಳಲ್ಲಿ ಕಾಣಿಸದ ತಪ್ಪುಗಳು ಸಿಇಸಿಗೆ ಮಾತ್ರವೇ ಕಾಣಿಸಿವೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸಿಇಸಿಗೆ ನಿರ್ದೇಶನ ನೀಡಿತ್ತು. ಆದರೆ, ಸಿಇಸಿ ಈ ಕೆಲಸ ಮಾಡಿಲ್ಲ. ಅಲ್ಲದೆ, ಜೀವ್ರಾಜಕಾ ಅವರು ಸ್ಥಳಕ್ಕೆ ಭೇಟಿ ನೀಡದೇ ದೆಹಲಿಯಲ್ಲಿ ಕೂತು ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಗಣಿ ಗುತ್ತಿಗೆ ನವೀಕರಣ, ಗಣಿ ಚಟುವಟಿಕೆ ನಡೆಸುವ ನಕ್ಷೆ ವಿಷಯಗಳು ಆಂಧ್ರ ಮತ್ತು ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಅಧಿಕಾರಿಗಳ ನಿರ್ದೇಶನಗಳ ಪ್ರಕಾರವೇ ಈ ಕೆಲಸ ನಡೆಯುತ್ತದೆ. ಬಳ್ಳಾರಿ ಐರನ್ ಓರ್‍ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಎಂಸಿ ಮಧ್ಯೆ 20 ಮೀಟರ್ ಪ್ರದೇಶದ ವಿವಾದ ಇದೆ. ಈ ವಿವಾದದ ಕುರಿತು ಈ ಸಿಇಸಿ ಏನನ್ನೂ ಹೇಳಿಲ್ಲ. ಸಿಇಸಿಯ ಈ ವರದಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡುವುದಿಲ್ಲ ಎನ್ನುವ ವಿಶ್ವಾಸ ಇದೆ.
ಕೇಳುತ್ತಲೇ ಇರುತ್ತಾರೆ' : ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮೂವರು ಸಚಿವರ ರಾಜೀನಾಮೆ ಕೇಳಿರುವ ಕುರಿತು ಪ್ರಶ್ನಿಸಿದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅವರು ನಮ್ಮ ಮೂವರು ಸಚಿವರ ರಾಜೀನಾಮೆ ಕೇಳುತ್ತಲೇ ಇದ್ದಾರೆ. ಮುಂದೆಯೂ ಕೇಳುತ್ತಲೇ ಇರುತ್ತಾರೆ. ಈಗ, ಸಿಎಂ ಅವರ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ದುಷ್ಟ ಶಕ್ತಿಗಳ ಷಡ್ಯಂತ್ರ : ಆಂಧ್ರದಲ್ಲಿ ವೈ.ಎಸ್.ಆರ್. ರಾಜಶೇಖರರೆಡ್ಡಿ ಮತ್ತು ಕರ್ನಾಟಕದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರಗಳ ಹಿಂದಿರುವ ದುಷ್ಟ ರಾಜಕೀಯ ಶಕ್ತಿಗಳ ದೊಡ್ಡದಾದ ಪಟ್ಟಿಯನ್ನೇ ಶೀಘ್ರದಲ್ಲೇ ಬಹಿರಂಗಗೊಳಿಸುತ್ತೇನೆ. ನಾವು ನ್ಯಾಯಬದ್ಧವಾಗಿ ಬದುಕನ್ನು ನಡೆಸುತ್ತಿದ್ದರೂ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ ಈ ಶಕ್ತಿಗಳು ಎಂದರು. ನಾವು ಅಕ್ರಮ - ಅನಧಿಕೃತ ಗಣಿಗಾರಿಕೆ ನಡೆಸಿಲ್ಲ ಎಂದು ಅವರು ಪುನರುಚ್ಛರಿಸಿದರು.
ಯಡಿಯೂರಪ್ಪ ಪ್ರತಿಕ್ರಿಯೆಗೆ ನಕಾರ : ಜನಾರ್ದನ ರೆಡ್ಡಿ ಅವರ ಮಾಲಿಕತ್ವದಲ್ಲಿರುವ ಗಣಿಗಾರಿಕೆ ಪರವಾನಿಗೆಯನ್ನು ರದ್ದುಪಡಿಸಬೇಕೆಂದು ಸಿಇಸಿ ಸುಪ್ರೀಂ ಕೋರ್ಟಿಗೆ ವರದಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಲು ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ. [ಅಕ್ರಮ ಗಣಿಗಾರಿಕೆ]












Click it and Unblock the Notifications