Get Updates
Get notified of breaking news, exclusive insights, and must-see stories!

ಅಂಗೈಯಗಲದ ಆಸ್ತಿಗೆ ಎರಡು ಹೆಣ ಬಿತ್ತು!

Double murder at Shanivarasanthe
ಕೊಡಗಿನ ಶನಿವಾರಸಂತೆಯ ಹುಲುಕೋಡುವಿನಲ್ಲಿ ಅಂಗೈಯಗಲದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಆರಂಭಗೊಂಡ ಮನಸ್ತಾಪ ಉಲ್ಭಣಗೊಂಡು ನಡೆದ ಜಗಳಕ್ಕೆ ವೃದ್ಧ ದಂಪತಿಗಳು ಬೀದಿ ಬದಿಯಲ್ಲಿ ಹೆಣವಾಗಿ ಹೋಗಿದ್ದಾರೆ. ಹತ್ಯೆಯ ಭೀಕರ ದೃಶ್ಯವನ್ನು ಹತ್ತಿರದಿಂದ ಕಂಡ ಗ್ರಾಮಸ್ಥರು ಮಾತ್ರ ಆ ಶಾಕ್‌ನಿಂದ ಹೊರಬಂದಿಲ್ಲ. ಅಷ್ಟೇ ಅಲ್ಲ ದ್ವೇಷ, ರೋಷಕ್ಕೆ ಮುಂದೇನಾಗಲಿದೆಯೋ ಎಂಬ ಆತಂಕವೂ ಅವರನ್ನು ದಿನನಿತ್ಯ ಕಾಡತೊಡಗಿದೆ.

ಹುಲುಕೋಡು ಕೊಡಗಿನ ಸೋಮವಾರಪೇಟೆ ತಾಲೂಕಿನ ಹಂಡ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಪುಟ್ಟ ಗ್ರಾಮ. ಈ ಗ್ರಾಮದ ಹೆಚ್ಚಿನವರು ಕಾಫಿಬೆಳೆಗಾರರು. ಅವತ್ತು ಜನವರಿ 1ನೇ ತಾರೀಕು ಶನಿವಾರ. ಕೆಲವರು ಹೊಸವರ್ಷದ ಗುಂಗಿನಲ್ಲಿದ್ದರೆ, ಇನ್ನು ಕೆಲವರು ಕಾಫಿ ತೋಟದ ಕೆಲಸದಲ್ಲಿ ನಿರತರಾಗಿದ್ದರು.

ಬೆಳಿಗ್ಗೆ 9.30ರ ಸಮಯ ಇಡೀ ಊರನ್ನೇ ಬೆಚ್ಚಿಬೀಳಿಸುವಂತಹ ಸುದ್ದಿಯೊಂದು ಕಾಳ್ಗಿಚ್ಚಿನಂತೆ ಹರಡಿತ್ತು. ಸುದ್ದಿ ಕೇಳಿ ಓಡಿದ ಜನಕ್ಕೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಫಿ ಬೆಳೆಗಾರರಾದ ಶಂಭುಲಿಂಗಪ್ಪ(60), ಪತ್ನಿ ಶಾರದಮ್ಮ(52) ದಂಪತಿಗಳು ಹೆಣವಾಗಿ ಬಿದ್ದಿದ್ದರು.

ಅಕ್ಸಿಡೆಂಟ್ ಅಲ್ಲ ಕೊಲೆ : ಮೇಲ್ನೋಟಕ್ಕೆ ಅಕ್ಸಿಡೆಂಟ್ ಎಂಬಂತೆ ಕಂಡು ಬಂದಿತ್ತಾದರೂ ಅದು ಅಕ್ಸಿಡೆಂಟ್ ಅಲ್ಲ ಕೊಲೆ ಎಂಬುವುದು ತಿಳಿಯಲು ಹೆಚ್ಚು ಸಮಯಬೇಕಾಗಲಿಲ್ಲ. ಆ ವೃದ್ದ ದಂಪತಿಗಳನ್ನು ಹಂತಕ ಅದೆಂತಹ ಭೀಕರವಾಗಿ ಹತ್ಯೆಗೈದಿದ್ದನೆಂದರೆ, ಮೊದಲಿಗೆ ಅವರು ಹೋಗುತ್ತಿದ್ದ ಸ್ಕೂಟರ್‌ಗೆ ತನ್ನ ಮಾರುತಿ ವ್ಯಾನ್‌ನಿಂದ ಡಿಕ್ಕಿ ಹೊಡೆದಿದ್ದ. ಅವರು ನೆಲಕ್ಕೆ ಬಿದ್ದು ಮೇಲೇಳುವ ಮೊದಲೇ ಕಲ್ಲೊಂದನ್ನು ಅವರ ತಲೆಯ ಮೇಲೆ ಎತ್ತಿಹಾಕಿದ್ದ. ಆ ರಭಸಕ್ಕೆ ತಲೆ ಒಡೆದು ಮೆದುಳು ಹೊರಬಂದಿತ್ತು.

ಒಣ ಪ್ರತಿಷ್ಠೆಯೇ ಮುಳುವಾಯಿತು: ಇವತ್ತು ಬರ್ಬರವಾಗಿ ಹತ್ಯೆಯಾಗಿರುವ ಶಂಭುಲಿಂಗಪ್ಪ ಹಾಗೂ ಹತ್ಯೆಗೈದಿರುವ ಹಂತಕ ಸುಮಂತ್ ಎಂಬಾತನ ತಂದೆ ರಮೇಶ್ ಒಂದೇ ಗ್ರಾಮದವರು ಅಷ್ಟೇ ಅಲ್ಲ ಒಂದೇ ಕುಟುಂಬದವರು. ಸಂಬಂಧದಲ್ಲಿ ಸಹೋದರರಾಗಬೇಕು. ಒಂದು ಕಾಲದಲ್ಲಿ ರಮೇಶ್ ಹಾಗೂ ಶಂಭುಲಿಂಗಪ್ಪ ಎಲ್ಲರಂತೇ ಅನ್ಯೋನ್ಯವಾಗಿದ್ದರು.

ಆದರೆ ಇವರ ನಡುವೆ ದಾರಿಗೆ ಸಂಬಂಧಿಸಿದಂತೆ ಆಸ್ತಿ ವಿವಾದ ಸದ್ದಿಲ್ಲದೆ ಎದ್ದು ನಿಂತಿತು. ಬುದ್ದಿವಂತರಾಗಿದ್ದರೆ ಇದನ್ನು ಸುಲಭವಾಗಿ ಪರಿಹರಿಸಬಹುದಿತ್ತು. ಇಲ್ಲಿ ಎರಡು ಕುಟುಂಬಗಳು ತಮ್ಮದೇ ನಡೆಯಬೇಕೆಂಬ ಪ್ರತಿಷ್ಠೆ ಬೆಳೆಸಿಕೊಂಡರು. ಒಬ್ಬರ ಮಾತನ್ನು ಇನ್ನೊಬ್ಬ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ದಿನಕಳೆದಂತೆ ದ್ವೇಷ ಬೆಳೆಯತೊಡಗಿತು. ಒಂದು ಕುಟುಂಬವನ್ನು ಕಂಡರೆ ಮತ್ತೊಂದು ಕುಟುಂಬಕ್ಕೆ ಆಗುತ್ತಿರಲಿಲ್ಲ. ಒಬ್ಬರನೊಬ್ಬರು ಕಾಲುಕೆರೆದುಕೊಂಡು ಜಗಳ ಮಾಡತೊಡಗಿದರು. ಒಟ್ಟಾರೆ ಎರಡು ಕುಟುಂಬಗಳು ಪಕ್ಕಾ ದುಶ್ಮಮನ್‌ಗಳಾಗಿಬಿಟ್ಟರು.

ಈ ನಡುವೆ ರಸ್ತೆಗೆ ಸಂಬಂಧಿಸಿದಂತೆ ಇದ್ದಂತಹ ವಿವಾದ ಹೊಸವರ್ಷದ ದಿನವೇ ಅತಿರೇಕಕ್ಕೆ ಹೋಗಿತ್ತು. ಅವತ್ತು ಬೆಳಿಗ್ಗೆ ಅಂದರೆ ಜನವರಿ 1 ರಂದು ಶನಿವಾರ ಬೆಳಿಗ್ಗೆ ಎಂದಿನಂತೆ ಉಪಹಾರ ಮುಗಿಸಿಕೊಂಡು ಕಾಫಿ ಕೊಯ್ಯಲು ರಮೇಶ್‌ರವರು ತಮ್ಮ ತಾಯಿ ಸರೋಜಾರವರೊಂದಿಗೆ ಮನೆ ಬಳಿಯ ತೋಟಕ್ಕೆ ಹೋಗಿದ್ದಾರೆ

ವೃದ್ಧ ದಂಪತಿಗಳ ಬೆನ್ನಟ್ಟಿದ ಸುಮಂತ:ಈ ಸಂದರ್ಭ ತೋಟಕ್ಕೆ ಅತಿಕ್ರಮ ಪ್ರವೇಶ ಮಾಡಿದ ಶಂಭುಲಿಂಗಪ್ಪ ಅವರ ಪುತ್ರ ಕರುಣಾಕರ ರಮೇಶ್‌ರವರೊಂದಿಗೆ ಜಗಳ ತೆಗೆದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕರುಣಾಕರ ಏಕಾಏಕಿ ರಮೇಶ್‌ರವರ ಮೇಲೆ ಕತ್ತಿಯಿಂದ ಕಡಿದಿದ್ದಾನೆ. ತೀವ್ರ ಹಲ್ಲೆಗೊಳಗಾದ ಅವರನ್ನು ನೋಡಿದ ಸೊಸೆ ನವೀನ ಜೋರಾಗಿ ಕಿರುಚಿದ್ದಾಳೆ.

ಘಟನೆ ನಡೆಯುವ ಸಂದರ್ಭ ರಮೇಶ್ ಅವರ ಪುತ್ರ ಸುಮಂತ್ ಕಾಫಿ ಪಲ್ಫರ್ ಮಾಡಿಸಲೆಂದು ಹೊರ ಹೋಗಿದ್ದರು. ಆದರೆ ಮಾವ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಸೊಸೆ ಚೀರುವುದಕ್ಕೂ ಮಗ ಸುಮಂತ್ ಮನೆಗೆ ಬರುವುದಕ್ಕೂ ಸರಿಯಾಗಿತ್ತು. ಪತ್ನಿ ಚೀರಿದ್ದನ್ನು ಕೇಳಿ ತೋಟದತ್ತ ಹೋದ ಸುಮಂತ್‌ಗೆ ತಂದೆ ರಮೇಶ್‌ರವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದೆ. ತಕ್ಷಣಕ್ಕೆ ಆತ ತನ್ನ ತಂದೆ ಸತ್ತೇ ಹೋಗಿದ್ದಾರೆ ಎಂದು ತಿಳಿದ್ದಾನೆ.

ನನ್ನ ಅಪ್ಪನ ಮೈ ಮೇಲೆ ಕೈ ಮಾಡಿದ ಕರುಣಾಕರನನ್ನು ಮುಗಿಸಿಯೇ ಮುಗಿಸುತ್ತೇನೆ ಎಂದು ಶಪಥ ಮಾಡಿ ತನ್ನ ಮಾರುತಿ ಓಮ್ನಿಯಲ್ಲಿ ನೇರವಾಗಿ ಕರುಣಾಕರನ ಮನೆಯತ್ತ ಹೊರಟಿದ್ದಾನೆ. ಆದರೆ ಅಷ್ಟರಲ್ಲಿಯೇ ಕರುಣಾಕರ ಎಸ್ಕೇಪ್ ಆಗಿದ್ದ. ಮಗ ಹಾಗೂ ರಮೇಶ್ ನಡುವೆ ನಡೆದ ಜಗಳದ ಬಗ್ಗೆ ಅರಿತ ಶಂಭುಲಿಂಗಪ್ಪ ಹಾಗೂ ಶಾರದಮ್ಮ ಅವರುಗಳು ಈ ಘಟನೆಯಿಂದ ತಮಗೆ ತೊಂದರೆ ಆಗುವ ಮೊದಲು ತಾವೇ ಶನಿವಾರಸಂತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವ ಉದ್ದೇಶವೋ ಅಥವಾ ಇನ್ನೆಲ್ಲಿಗೆ ಹೊರಟಿದ್ದರೋ ಗೊತ್ತಿಲ್ಲ.

ಶನಿವಾರಸಂತೆ ಕಡೆಗೆ ಹೋಗುವ ರಸ್ತೆಯಲ್ಲಿ ನಡೆಯುತ್ತಾ ಹೊರಟಿದ್ದಾರೆ. ಅಷ್ಟರಲ್ಲಿಯೇ ಅದೇ ಮಾರ್ಗವಾಗಿ ಗ್ರಾಮದ ಪರಿಚಿತರಾದ ಮಹೇಶ್ ಆಚಾರಿ ಎಂಬುವರು ಸ್ಕೂಟರ್‌ನಲ್ಲಿ ಬಂದಿದ್ದಾರೆ. ಅವರನ್ನು ತಡೆದ ಶಂಭುಲಿಂಗಪ್ಪರವರು ನಮಗೆ ಅರ್ಜೆಂಟ್ ಶನಿವಾರಸಂತೆಗೆ ಹೋಗಬೇಕು. ಆದ್ದರಿಂದ ಅವರದಾಳು ಗ್ರಾಮದ ಮುಖ್ಯ ರಸ್ತೆ ತನಕ ಬಿಟ್ಟು ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಆತ ದಂಪತಿಗಳಿಬ್ಬರನ್ನು ತನ್ನ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದಾನೆ.

ಅದೇ ರಸ್ತೆಯಲ್ಲಿ ಬಂದ ಸುಮಂತ್‌ಗೆ ದೂರದಲ್ಲಿ ಸ್ಕೂಟರ್‌ನಲ್ಲಿ ಕರುಣಾಕರನ ಅಪ್ಪ, ಅಮ್ಮ ಹೋಗುವುದು ಕಾಣಿಸಿದೆ. ಕೋಪ ನೆತ್ತಿಗೇರಿದೆ. ನನ್ನ ಅಪ್ಪನ ಮೇಲೆ ಕೈ ಮಾಡಿದಾತನ ಅಪ್ಪ, ಅಮ್ಮನನ್ನು ಕೂಡ ಬಿಡಬಾರದು ಅವರಿಗೂ ಒಂದು ಗತಿ ಕಾಣಿಸಬೇಕು ಎಂದು ಯೋಚಿಸಿದವನೇ ವ್ಯಾನ್‌ನ್ನು ಇನ್ನಷ್ಟು ವೇಗವಾಗಿ ಚಲಿಸಿ ಸ್ಕೂಟರ್ ಪಕ್ಕಕ್ಕೆ ಬಂದವನೇ ಡಿಕ್ಕಿ ಹೊಡೆದಿದ್ದಾನೆ.

ಈ ಸಂದರ್ಭ ಸ್ಕೂಟರ್ ಓಡಿಸುತ್ತಿದ್ದ ಮಹೇಶ್ ಆಚಾರಿಯ ನಿಯಂತ್ರಣ ತಪ್ಪಿದ ಸ್ಕೂಟರ್ ನೆಲಕ್ಕೆ ಉರುಳಿದೆ. ಸ್ಕೂಟರ್‌ನಲ್ಲಿದ್ದವರು ಒಂದೊಂದು ಕಡೆಗೆ ಹಾರಿದ್ದಾರೆ. ವ್ಯಾನ್‌ನ್ನು ರಸ್ತೆ ಬದಿಗೆ ನಿಲ್ಲಿಸಿ ಅದರಿಂದ ಇಳಿದು ಬಂದ ಸುಮಂತ್ ರಸ್ತೆ ಬದಿಯಲ್ಲಿ ಬಿದ್ದಿದ್ದ ದೊಡ್ಡದಾದ ಕಲ್ಲೊಂದನ್ನು ಎತ್ತಿಕೊಂಡು ಬಂದಿದ್ದಾನೆ. ಇದನ್ನು ನೋಡಿದ ಮಹೇಶ್ ಆಚಾರಿ ಇಲ್ಲಿಯೇ ಇದ್ದರೆ ತನ್ನನ್ನು ಕೂಡ ಸಾಯಿಸಿಬಿಡಬಹುದು ಎಂದು ಹೆದರಿ ಬದುಕಿದರೆ ಸಾಕು ಎನ್ನುತ್ತಾ ಸ್ಕೂಟರ್‌ನ್ನು ಸ್ಥಳದಲ್ಲಿಯೇ ಬಿಟ್ಟು ಪಕ್ಕದ ಕಾಫಿ ತೋಟದೊಳಕ್ಕೆ ನುಗ್ಗಿ ಓಡಿದ್ದಾನೆ.

ಸ್ಕೂಟರ್‌ನಿಂದ ಬಿದ್ದ ಶಂಭುಲಿಂಗಪ್ಪ ಹಾಗೂ ಶಾರದ ದಂಪತಿಗಳಿಗೆ ಬಲವಾದ ಗಾಯಗಳಾಗಿದ್ದು, ಮೇಲೇಳಲಾಗದೆ ಅಲ್ಲೇ ಹೊರಳಾಡತೊಡಗಿದ್ದಾರೆ. ಮೊದಲಿಗೆ ಶಾರದಮ್ಮನ ಬಳಿ ಹೋದ ಸುಮಂತ್ ಕಲ್ಲನ್ನು ಎತ್ತಿ ಅವರ ತಲೆ ಮೇಲೆ ಹಾಕಿದ್ದಾನೆ. ಆ ಕಲ್ಲು ಬಿದ್ದ ರಭಸಕ್ಕೆ ತಲೆ ಜಜ್ಜಿಹೋಗಿ ಮೆದುಳು ಈಚೆಗೆ ಬಂದು ಆಕೆ ತಕ್ಷಣವೇ ಎನ್ನದೆ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಅದೇ ಕಲ್ಲನ್ನು ಎತ್ತಿಕೊಂಡು ಹೋದ ಸುಮಂತ್ ಶಂಭುಲಿಂಗಪ್ಪನವರ ತಲೆ ಮೇಲೆ ಹಾಕಿದ್ದಾನೆ. ಅಲ್ಲಿಗೆ ಇಬ್ಬರ ಪ್ರಾಣವೂ ಹೋಯ್ತು ಎಂದು ದೃಢವಾಗುತ್ತಿದ್ದಂತೆಯೇ ವ್ಯಾನ್‌ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಹತ್ಯೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಇಷ್ಟು ಚಿಕ್ಕ ವಿಚಾರಕ್ಕೆ ಕೊಲೆ ಮಾಡಿದ ಸುಮಂತ್ ವಿರುದ್ಧ ಕೂಗಾಡಿದರಲ್ಲದೆ, ಸ್ಥಳದಲ್ಲಿದ್ದ ಆತನ ಮಾರುತಿ ವ್ಯಾನ್‌ನ್ನು ಜಖಂಗೊಳಿಸಿದ್ದಾರೆ. ವಿಷಯ ತಿಳಿದ ಶನಿವಾರಸಂತೆ ಠಾಣೆಯ ಠಾಣಾಧಿಕಾರಿ ಡಿ. ಮಂಜುನಾಥ್ ತಮ್ಮ ಸಿಬ್ಬಂದಿಗಳೊಂದಿಗೆ ಆಗಮಿಸಿ ಸ್ಥಳದಲ್ಲಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದರು.

ಅಷ್ಟರಲ್ಲಿಯೇ ಎಸ್ಪಿ ಮಂಜುನಾಥ್‌ಅಣ್ಣಿಗೇರಿ, ಡಿವೈಎಸ್ಪಿ ಜಯಪ್ರಕಾಶ್ ಅಕ್ಕರಕಿ, ಸಿಐ ಕೃಷ್ಣಯ್ಯ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದ ಮಹಜರು ನಡೆಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.

ಇತ್ತ ಆರೋಪಿ ಸುಮಂತ್ ಪರಾರಿಯಾಗಿದ್ದು, ಆತನ ತಂದೆ ಕರುಣಾಕರನಿಂದ ಹಲ್ಲೆಗೊಳಗಾದ ರಮೇಶ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸುಮಂತ್ ಪತ್ನಿ ನವೀನ ಕೂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಸುಮಂತ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನಾದರೂ ಆಸ್ತಿ ವಿವಾದ ಪ್ರಕರಣ ಅಂತ್ಯಗೊಳ್ಳುತ್ತದೆಯಾ ಅಥವಾ ಇನ್ನೆಷ್ಟು ಹೆಣ ಬೀಳಬೇಕೋ?. [ಕ್ರೈಂ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+