ಹೊಸ ವರ್ಷಕ್ಕೆ ಮೊದಲೇ ಸಾವಿನ ಕದ ತಟ್ಟಿದ

ಚನ್ನಪಟ್ಟಣ ತಾಲೂಕಿನ ಅಮ್ಮಳ್ಳಿದೊಡ್ಡಿಯ ಕುಮಾರ್ ತನ್ನ ಪತ್ನಿ ಮತ್ತು ಮಕ್ಕಳ ನೇಣಿನ ಕುಣಿಕೆ ಕೊರಳೊಡ್ಡುವ ತಾಸುಗಳ ಮುನ್ನ ತನ್ನ ಗೆಳೆಯರ ಮೊಬೈಲ್‌ಗಳಿಗೆ ಇಂಥದೊಂದು ಹೊಸ ವರ್ಷದ ಸಂದೇಶ ಕಳುಹಿಸಿ, ಸಂದೇಶವನ್ನು ಓದುವ ಮೊದಲೇ 2011ರ ಕ್ಯಾಲೆಂರ್ ನೋಡದಂತೆ ಮಾಯವಾಗಿದ್ದಾನೆ. ಸಾಲದ ಸುಳಿಯಿಂದ ಒಂದು ಕುಟುಂಬದ ಸುಳಿಯೇ ಇಲ್ಲದಂತಾಗಿದೆ.
ಹೌದು, ಭೂಮಿ ನಂಬಿ ಸಣ್ಣೊಂದು ಕೈ ಸಾಲ'ಕ್ಕೆ ಅಂಜಿ ತನ್ನ 12 ವರ್ಷದ ದಾಂಪತ್ಯದಲ್ಲಿ ಅರಳಿದ ಕುಡಿಗಳ ಜತೆಗೆ ಮಳವಳ್ಳಿ ತಾಲೂಕಿನ ಬಾಣಸಮುದ್ರ ಬಳಿ ಮಡದಿ, ಮಕ್ಕಳ ಜತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಮಾರ್ 3 ಚದರದ ಆರ್‌ಸಿಸಿ ಮನೆ ಕಟ್ಟಿಕೊಳ್ಳಲು ಸುಮಾರು 2.50 ಲಕ್ಷದಷ್ಟು ಸಾಲ ಮಾಡಿದ್ದ. ಆತನಿಗಿದ್ದ 2 ಎಕರೆ ಖುಷ್ಕಿ ಜಮೀನು ಖುಷಿ' ಕೊಟ್ಟಿರಲಿಲ್ಲ. ಸ್ವಂತದ್ದೊಂದು ಮನೆ ಕಟ್ಟಲು ಮಾಡಿದ ಸಾಲ, ಮಕ್ಕಳ ವಿದ್ಯಾಭ್ಯಾಸದ ಹೊಣೆಯಿಂದ ಮೆಕಾನಿಕ್ ಕೆಲಸ ಮಾಡುತ್ತಿದ್ದ. ಸಂಸಾರ ನಡೆಸುವುದು ಕಷ್ಟವಾದಾಗ ತನ್ನ ಪತ್ನಿ ಶಾಂತಮ್ಮಳನ್ನು ಕಳೆದ ಒಂದು ತಿಂಗಳಿಂದ ಹೊಂಗನೂರಿನ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಸೇರಿಸಿದ್ದ. ಆ ಸಂಬಳವು ತನ್ನ ಬದುಕನ್ನು ಹಸನು ಮಾಡಿಕೊಳ್ಳಲು ಸಾಧ್ಯವಾಗದೆಂದು ನಂಬಿ ಜಿಗುಪ್ಸೆಗೊಂಡ ಕುಮಾರ್, ಇಲ್ಲಿ ಕಟ್ಟಿದ್ದು ಸುಮ್ಮನೆ, ಅಲ್ಲಿರುವುದೇ ನಮ್ಮನೆ ಎಂದು ಹತಾಶೆಗೊಂಡು ಕಟ್ಟಿದ್ದ ಮನೆಯ ಗೃಹ ಪ್ರವೇಶ' ಮಾಡುವ ಮೊದಲೇ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಂಡು ಸಾವಿನ ಮನೆ ಕದ ತೆಗೆದು ಹೋಗಿ ಬಿಟ್ಟಿದ್ದಾನೆ.
ಅಂಜಿದ ಮನಕ್ಕೆ ಸಾವಿನ ಸಾಂತ್ವನ : ದುಬಾರಿಯಾದ ಕೈ ಸಾಲ, ಹೇರುತ್ತಿದ್ದ ಬಡ್ಡಿ, ಹೆಚ್ಚಿದ ಸಾಲಗಾರರ ಒತ್ತಡ, ಕೈಗತ್ತದ ಬೆಳೆ, ಮಕ್ಕಳ ಭವಿಷ್ಯ ರೂಪಿಸದಷ್ಟು ಅಸಹಾಯಕತೆ, ಹೆತ್ತ ತಂದೆ-ತಾಯಿಗಳ ಹಾರೈಕೆಗೂ ಧಕ್ಕೆ... ಇದರಿಂದ ಕುಡಿತ ಕುಮಾರ್‌ನನ್ನು ಕೈ ಬೀಸಿ ಕರೆಯಿತು. ಇದರಿಂದ ಮತ್ತಷ್ಟು ಜರ್ಜರಿತನಾದ ಆತ ಬದುಕನ್ನು ಸರಿ ಮಾಡಿಕೊಳ್ಳಲು ನಿಶ್ಚಯಿಸಿ, ತನ್ನ ಬರ ಪೀಡಿತ ಜಮೀನಿಗೆ ನೀರಾವರಿ ಮಾಡಲು ತೀರ್ಮಾನಿಸಿ, ಕಂಡಕಂಡ ಬ್ಯಾಂಕುಗಳಿಗೆ ಸಾಲಕ್ಕೆ ಅಲೆದರೂ ಅದು ಕುಮಾರ್‌ನಂತ ನತದೃಷ್ಟನಿಗೆ ನಿಲುಕದಂತಾಯಿತು. ಇದರಿಂದ ತನ್ನ ಸ್ಥೈರ್ಯ ಕಳೆದುಕೊಂಡ ಆತನಿಗೆ ಸಿಕ್ಕಿದ್ದು ಸಾವಿನ ಸಾಂತ್ವನ!
ಗಂಗೆ ಕರೆಯಲಿಲ್ಲ : ಮುತ್ತತ್ತಿಗೆ ಮೊದಲು ತೆರಳಿ, ಅಲ್ಲಿನ ಮುತ್ತತ್ತಿರಾಯನಿಗೆ ಪೂಜೆ ಸಲ್ಲಿಸಿ, ಅಲ್ಲಿನ ಕಾವೇರಿ ನದಿಗೆ ನಾಲ್ಕು ಮಂದಿಯೂ ಒಟ್ಟಿಗೆ ಬೀಳಲು ನಿಶ್ಚಯಿಸಿದ್ದಾರೆ. ಆದರೆ, ನೀರು ಕಡಿಮೆ ಇದ್ದಿದ್ದರಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ, ಬಾಣಸಮುದ್ರ ಬಳಿಗೆ ಬಂದು ಅಲ್ಲಿ ಮಕ್ಕಳನ್ನು ದೂರವಿರಿಸಿ, ಪತ್ನಿ ಶಾಂತಮ್ಮಳನ್ನು ಕುತ್ತಿಗೆ ಹಗ್ಗ ಬಿಗಿದು ಸಾಯಿಸಿದ್ದಾನೆ. ನಂತರ ನವೀನ್ ಮತ್ತು ಜ್ಯೋತಿ ಕತ್ತಿಗೆ ಹಗ್ಗ ಬಿಗಿದು ಅವರನ್ನು ಸಾಯಿಸಿ, ತಾನು ನೇಣಿನ ಕುಣಿಕೆಗೆ ಕೊರಳೊಪ್ಪಿಸುವ ಮುನ್ನ ತನ್ನ ಗೆಳೆಯ ಶ್ರೀಕಂಠೇಗೌಡನ ಮೊಬೈಲ್‌ಗೆ ಕರೆ ಮಾಡಿ, ನಾನು ಜೀವನದಲ್ಲಿ ಜಿಗುಪ್ಸೆಗೊಂಡು ಸಾಯಲು ಬಯಸಿದ್ದೇನೆ. ಈಗಾಗಲೇ ಇಂಥ ಜಾಗದಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳನ್ನು ನೇಣು ಬಿಗಿದು ಸಾಯಿಸಿದ್ದೇನೆ. ಈಗ ನನ್ನ ಸರದಿ, ನನ್ನನ್ನು ಕಾಡು ಹೆಣ ಮಾಡಬೇಡಿ. ನನ್ನ ಹೆಣವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಸುಡದೇ ಎಲ್ಲಾರನ್ನೂ ಒಂದೇ ಗುಂಡಿಯಲ್ಲಿ ಹೂತುಬಿಡಿ ಎಂದು ಬಿಕ್ಕಿದ ಕುಮಾರ್ ಕರೆಯನ್ನು ಮೊಟಕುಗೊಳಿಸಿದ್ದಾನೆ.
ಅಪ್ಪನ ಹಣ ಜೀವ ನೀಡಬಹುದಿತ್ತೇ? : ಆತ್ಮಹತ್ಯೆ ಮಾಡಿಕೊಂಡ ಕುಮಾರನ ತಂದೆ ಚಿಕ್ಕಮೊಟೇಗೌಡ (ಮಾಸ್ತಿಗೌಡ) ತನ್ನ ಮುಪ್ಪಿನ ಜೀವನದಲ್ಲಿ ನೆರವಿಗೆ ಬರಲೆಂದು ಒಂದಷ್ಟು ಹಣವನ್ನು ಕೈ ಸಾಲ ನೀಡಿದ್ದರು. ಆ ಸಾಲವನ್ನು ಕುಮಾರನಿಗೆ ನೀಡಿದ್ದರೇ ಆತ ಉಳಿಯುತ್ತಿದ್ದನೇನೋ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸಾವಿನ ಸರಣಿ : ಕುಮಾರನ ಅಣ್ಣ ಎಸ್‌ಎಸ್‌ಎಲ್‌ಸಿ ಓದುವಾಗ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಜತೆಗೆ ಈಕೆಯ ಅಕ್ಕಳನ್ನು ಮಂಡ್ಯಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆಕೆಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಗ ಕುಟುಂಬಕ್ಕೆ ಆಧಾರವಾಗಿದ್ದ ಕುಮಾರ್ ಕೂಡ ಇಲ್ಲವಾಗಿದ್ದು, ತನ್ನ ಕುಡಿಗಳನ್ನು ಸಹ ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದರಿಂದ ಅಕ್ಷರಶ: ಅಮ್ಮಳ್ಳಿದೊಡ್ಡಿ ಚಿಕ್ಕಮೊಟೇಗೌಡ ಕುಟುಂಬಕ್ಕೆ ಮುಂದಿನ ಪೀಳಿಗೆ ಇಲ್ಲವಾಗಿದೆ. [ಚನ್ನಪಟ್ಟಣ]












Click it and Unblock the Notifications