ತಲಕಾವೇರಿಯಲ್ಲಿ ತಿರುಗದ ಗಾಳಿಯಂತ್ರಗಳು...

Windmills, Brahmagiri
ಉತ್ತರ ಕರ್ನಾಟಕದ ಕಪ್ಪದಗುಡ್ಡದಲ್ಲಿ ಗಾಳಿಯಂತ್ರದ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದ್ದರೆ, ಇತ್ತ ಕೊಡಗಿನಲ್ಲಿ ಅಂತಹವೊಂದು ಯೋಜನೆ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿ ಕಾರ್ಯರೂಪಕ್ಕೆ ಬಾರದೆ ಕೋಟ್ಯಾಂತರ ರೂಪಾಯಿ ಗಾಳಿಪಾಲಾಗಿರುವುದು ತುಕ್ಕುಹಿಡಿದ ನಮ್ಮ ಆಡಳಿತ ವ್ಯವಸ್ಥೆಗೊಂದು ಕೈಗನ್ನಡಿಯಾಗಿದೆ.

ಮೂಕಸಾಕ್ಷಿ: ಇವತ್ತು ಕೊಡಗಿನ ತಲಕಾವೇರಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಿದರೆ ಎದುರಿನ ಬಾಪುರೆ ಬೆಟ್ಟದಲ್ಲಿ ಕಾಣಸಿಗುವ ಬೃಹತ್ ಗಿರಿಗಟ್ಲೆಯಾಕಾರದ ಐದು ಗಾಳಿಯಂತ್ರಗಳು ತನ್ನ ಒಂದೊಂದೇ ಅವಶೇಷಗಳನ್ನು ಕಳೆದುಕೊಂಡು ಸರ್ಕಾರದ ನಿರ್ಲಕ್ಷ್ಯವನ್ನು ಜಗತ್ತಿಗೆ ಸಾರಲೇನೋ ಎಂಬಂತೆ ನಿಂತಿವೆಯಲ್ಲದೆ, ನಮ್ಮ ಜನಪ್ರತಿನಿಧಿಗಳ ಇಚ್ಛಾಕೊರತೆಗೆ ಮೂಕಸಾಕ್ಷಿಯಾಗಿವೆ.

ಕೊಡಗಿನ ತಲಕಾವೇರಿಯ ಬಾಪುರೆ ಬೆಟ್ಟಪ್ರದೇಶದಲ್ಲಿ ಇಂದು ತುಕ್ಕುಹಿಡಿಯುತ್ತಾ ನಿಂತಿರುವ ಗಾಳಿಯಂತ್ರಗಳ ಬಗ್ಗೆ, ಅವುಗಳಿಂದ ವಿದ್ಯುತ್ ಉತ್ಪಾದಿಸುವ ಸರ್ಕಾರದ ಯೋಜನೆ ನೆನೆಗುದಿಗೆ ಬಿದ್ದ ಬಗ್ಗೆ ತಿಳಿಯಬೇಕಾದರೆ ನಾವು ಸುಮಾರು ಎರಡು ದಶಕಗಳ ಹಿಂದಿನ ದಿನಗಳಿಗೆ ಹೋಗಬೇಕಾಗುತ್ತದೆ.

ಗಮನಸೆಳೆದ ಕಾರಂತರ ಭಾಷಣ: ಅದು 1987ರ ದಿನಗಳು... ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿಯ ನಿಸರ್ಗ ನಶಿಸಿ ಹೋಗುತ್ತಿರುವ ಬಗ್ಗೆ ಕಳವಳಗೊಂಡ ಪರಿಸರ ಪ್ರೇಮಿಗಳು ನಿಸರ್ಗ ಉಳಿಸುವ ನಿಟ್ಟಿನಲ್ಲಿ ಅಪ್ಪಿಕೋ ಚಳವಳಿಯನ್ನು ಪ್ರಾರಂಭಿಸಿದರು. ಆ ಚಳವಳಿಗೆ ಪರಿಸರವಾದಿ ಲೇಖಕ ದಿ. ಡಾ.ಶಿವರಾಮಕಾರಂತರು ಆಗಮಿಸಿ ಮಾತನಾಡುತ್ತಾ ಕೊಡಗಿನ ನಿಸರ್ಗದಿಂದ ಅಂದರೆ ಪವನಶಕ್ತಿಯಿಂದ ಸುಲಭವಾಗಿ ವಿದ್ಯುತ್ ತಯಾರಿಸಬಹುದು ಎಂಬ ಸಲಹೆಯನ್ನು ನೀಡಿದರಲ್ಲದೆ, ಈಗಾಗಲೇ ಡೆನ್ಮಾರ್ಕ್‌ನಲ್ಲಿ ಗಾಳಿಯಂತ್ರದ ಮೂಲಕ ವಿದ್ಯುತ್ ತಯಾರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಕೂಡ ನೀಡಿದರು.

ಇದು ಸರ್ಕಾರದ ಗಮನಸೆಳೆಯಿತು. ಹಾಗಾಗಿ 1988ರ ಫೆಬ್ರವರಿಯಲ್ಲಿ ತಲಕಾವೇರಿಯಲ್ಲಿ ಗಾಳಿಯಂತ್ರವನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಆಲೋಚಿಸಿತು. ಈ ಬಗ್ಗೆ ಸೂಕ್ತ ಸಲಹೆಯನ್ನು "ನ್ಯಾಷನಲ್ ಏರೋನ್ಯಾಟಿಕ್ ಲ್ಯಾಬ್"ನ ಅಧಿಕಾರಿ ಪ್ರೊಫೆಸರ್ ತಿವಾರಿ ಎಂಬುವರಿಂದ ಕೋರಿತು. ಪ್ರೊ. ತಿವಾರಿಯವರು ತಲಕಾವೇರಿಗೆ ಭೇಟಿ ನೀಡಿ ಪರೀಕ್ಷಿಸಿದರು.

ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ಬೆಟ್ಟಗಳ ಮೇಲೆ "ಮೈಕ್ರೋಪ್ರೊಸೆಸರ್" ಎಂಬ ಉಪಕರಣವನ್ನು ಅಳವಡಿಸಿ ಗಾಳಿಯಂತ್ರವನ್ನು ನಿರ್ಮಿಸಲು ಬ್ರಹ್ಮಗಿರಿಬೆಟ್ಟ, ಕಾಟಿಪಳ್ಳಿಯಬೆಟ್ಟ ಹಾಗೂ ಬಾಪುರೆ ಬೆಟ್ಟಗಳು ಸೂಕ್ತವಾಗಿವೆ ಎಂದು ತಿಳಿಸಿದರು.

ಬಾಪುರೆ ಬೆಟ್ಟ ಆಯ್ಕೆ: ಬ್ರಹ್ಮಗಿರಿಬೆಟ್ಟ ಹಾಗೂ ಕಾಟಿಪಳ್ಳಿಯ ಬೆಟ್ಟಪ್ರದೇಶದಲ್ಲಿ ಗಾಳಿಯಂತ್ರಗಳನ್ನು ನಿರ್ಮಿಸಿದ್ದೇ ಆದರೆ ಜನರಿಂದ ವಿರೋಧ ವ್ಯಕ್ತವಾಗಬಹುದೆಂದು ಆ ಎರಡು ಬೆಟ್ಟಗಳನ್ನು ಹೊರತುಪಡಿಸಿ ತಲಕಾವೇರಿಗೆ ಎರಡು ಕಿ.ಮೀ. ದೂರದಲ್ಲಿರುವ ನಾಲ್ಕು ಸಾವಿರದ ನೂರು ಅಡಿ ಎತ್ತರವಿರುವ ಬಾಪುರೆ ಬೆಟ್ಟದಲ್ಲಿ ಗಾಳಿಯಂತ್ರವನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಆದರೆ ಇದಕ್ಕೆ ಸ್ಥಳೀಯ ಜನರಿಂದ ವಿರೋಧ ವ್ಯಕ್ತವಾಯಿತಾದರೂ ಅದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಯೋಜನೆಗೆ ಸಂಬಂಧಿಸಿದಂತೆ ದೆಹಲಿಯಿಂದ ಪರವಾನಗಿಯನ್ನು ಪಡೆದರಲ್ಲದೆ, ಯೋಜನೆ ತೀವ್ರಗತಿಯಲ್ಲಿ ಆರಂಭವಾಯಿತು.

ಗಾಳಿಯಂತ್ರ ಖರೀದಿ: ಸರ್ಕಾರವು ಡೆನ್ಮಾರ್ಕಿನ "ವಿಮ್‌ಕಾನ್" ಎಂಬ ಸಂಸ್ಥೆಯೊಂದಿಗೆ ವ್ಯವಹರಿಸಿ ಸುಮಾರು ಎಂಬತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಇಪ್ಪತ್ತನಾಲ್ಕು ಮೀಟರ್ ಎತ್ತರದ ತಲಾ ಎಂಟು ಮೀಟರ್ ಉದ್ದದ ಮೂರು ರೆಕ್ಕೆಗಳಿರುವ ಐದು ಗಾಳಿಯಂತ್ರಗಳನ್ನು ಖರೀದಿಸಿತು. ಇದಕ್ಕೆ ತಗುಲಿದ ಒಟ್ಟು ವೆಚ್ಚದ ಶೇಕಡಾ ಐವತ್ತನ್ನು ಕೇಂದ್ರ ಸರ್ಕಾರ ಭರಿಸಿದರೆ, ಉಳಿದುದನ್ನು ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ನೀಡಿತು. ಯಂತ್ರಗಳ ಜೋಡಣೆಗೆ ಅಗತ್ಯವಾದ ಕೆಲಸಗಳನ್ನು ನೋಡಿಕೊಳ್ಳಲು ವಿದ್ಯುತ್ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಜವಾಬ್ದಾರಿ ವಹಿಸಿಕೊಡಲಾಯಿತು.

ಕೈತೊಳೆದುಕೊಂಡ ಜೆ.ಕೆ.ಕಂಪನಿ: ಗಾಳಿಯಂತ್ರಗಳನ್ನು ತಲಕಾವೇರಿಯ ಬಾಪುರೆ ಬೆಟ್ಟದಲ್ಲಿ ಸ್ಥಾಪಿಸುವ ಜವಾಬ್ದಾರಿಯನ್ನು ಸರ್ಕಾರದಿಂದ ವಹಿಸಿಕೊಂಡ ಜೆ.ಕೆ. ಕಂಪನಿಯು ಕಾರ್ಯಪ್ರವೃತ್ತವಾಗಿ ಗಾಳಿಯಂತ್ರಗಳನ್ನು ಡೆನ್ಮಾರ್ಕಿನಿಂದ ಹಡಗಿನ ಮೂಲಕ ಮದರಾಸಿಗೆ ತರಿಸಿಕೊಂಡಿತು. ನಂತರ ಲಾರಿಗಳ ಮೂಲಕ ತಲಕಾವೇರಿಗೆ ಸಾಗಿಸಲಾಯಿತು. ಈ ಸಂದರ್ಭ ಗಾಳಿಯಂತ್ರಗಳನ್ನು ಸಮರ್ಪಕವಾಗಿ ಜೋಡಿಸಲು ಡೆನ್ಮಾರ್ಕಿನಿಂದ ನೋಡ್ ಎಂಬ ಇಂಜಿನೀಯರ್ ಜೊತೆಯಲ್ಲಿಯೇ ಬಂದರು.

ತಲಕಾವೇರಿಗೆ ಆಗಮಿಸಿದ ಇಂಜಿನೀಯರ್ ನೋಡ್ ಅವರಿಗೆ ಗಾಳಿಯಂತ್ರಗಳನ್ನು ನಿರ್ಮಿಸಲು ಯೋಜಿಸಿದ ಸ್ಥಳ ಸೂಕ್ತವಾಗಿರುವ ಬಗ್ಗೆ ಸಂತಸವಾಯಿತಾದರೂ ಗಾಳಿಯಂತ್ರಗಳನ್ನು ತಲಕಾವೇರಿಗೆ ಸಾಗಿಸಿದ ರೀತಿ, ಅದನ್ನು ಲಾರಿಯಿಂದ ಕೆಳಕ್ಕೆ ಮರದ ದಿಮ್ಮಿಗಳನ್ನು ಉರುಳಿಸಿದಂತೆ ಇಳಿಸಿದ ರೀತಿಯನ್ನು ನೋಡಿ ದಿಗ್ಬ್ರಮೆಯಾಯಿತು. ಅಲ್ಲದೆ, ಇಂಜಿನೀಯರ್‌ಗಳ ಕಾರ್ಯವೈಖರಿ, ಜೊತೆಗೆ ಅಧಿಕಾರಿಗಳ ಅಸಹಕಾರ ಇವೆಲ್ಲವೂ ಅವರಿಗೆ ಬೇಸರ ತರಿಸಿತು. ಇನ್ನು ಇಲ್ಲಿ ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂದರಿತ ಅವರು ಬೇಗನೆ ತಮ್ಮ ದೇಶಕ್ಕೆ ಹಿಂತಿರುಗಿದರು.

ಇದರಿಂದ ವಿಚಲಿತವಾದ ಜೆ.ಕೆ.ಕಂಪನಿ ಅನ್ಯ ಮಾರ್ಗವಿಲ್ಲದೆ ತನಗೆ ತೋಚಿದಂತೆ ಜೋಡಿಸಿ ತೊಳೆದುಕೊಂಡಿತು. ಹೆಚ್ಚು ದಿನ ತಿರುಗದ ಗಾಳಿಯಂತ್ರ: ಮೊದಲ ಬಾರಿಗೆ ಗಾಳಿಯಂತ್ರಗಳು ತಿರುಗಲಾರಂಭಿಸಿದವು. ಇನ್ನೇನು ಕುಗ್ರಾಮಗಳಿಗೂ ವಿದ್ಯುತ್ ಬರುತ್ತದೆ ಎಂದರಿತ ಜಿಲ್ಲೆಯ ಜನತೆ ಬೆಳಕಿನ ಕನಸು ಕಂಡರು. ಅಂದಿನ ಆಡಳಿತ ಸರ್ಕಾರಕ್ಕೆ ಭರ್ಜರಿ ಪ್ರಚಾರದೊಂದಿಗೆ, ರಾಜ್ಯಪಾಲರ ಪ್ರಶಂಸೆಯೂ ದೊರೆಯಿತು.

ಉತ್ಪಾದನೆಗೊಂಡ ವಿದ್ಯುತ್ ಮಡಿಕೇರಿಯ "ಗ್ರೀಡ್"ಗೆ ಪೂರೈಕೆಯಾಗತೊಡಗಿತು. ಆದರೆ ಅದು ಹೆಚ್ಚು ದಿನ ಮುಂದುವರೆಯಲಿಲ್ಲ. ಕೆಲವೇ ದಿನಗಳಲ್ಲಿ ಗಾಳಿಯಂತ್ರಗಳು ಕೆಟ್ಟು ನಿಂತವು. ಕೆಲಸ ಪೂರೈಸಿ ಹೋದ ಜೆ.ಕೆ.ಕಂಪನಿ ಇತ್ತ ತಲೆಹಾಕಲಿಲ್ಲ. ಇಲ್ಲಿನ ಇಂಜಿನೀಯರ್‌ಗಳಿಗೆ ಅದರ ತಲೆಬುಡ ಅರ್ಥವಾಗದೆ ತಟಸ್ಥರಾದರು. ನಿರ್ಮಾಣದ ಸಂದರ್ಭ ಇದ್ದಂತಹ ಉತ್ಸಾಹ ಬಳಿಕ ಅಧಿಕಾರಿಗಳಿಗಾಗಲೀ, ಸರ್ಕಾರಕ್ಕಾಗಲಿ ಇರಲಿಲ್ಲ. ಪರಿಣಾಮ ಸುಮಾರು ಎರಡು ಕೋಟಿ ರೂಪಾಯಿಯಷ್ಟು ಖರ್ಚು ಮಾಡಿ ರೂಪಿಸಿದ ಯೋಜನೆ ಸದ್ದಿಲ್ಲದೆ ಗಾಳಿಪಾಲಾಯಿತು.

ಸರ್ಕಾರ ತಟಸ್ಥ: ಆ ನಂತರ ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದಲ್ಲದೆ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದವು. ಗಾಳಿಯಂತ್ರಗಳನ್ನು ದುರಸ್ತಿ ಪಡಿಸುವಲ್ಲಿ ಆಗ ಆಡಳಿತದಲ್ಲಿದ್ದ ಸರ್ಕಾರವಾಗಲೀ, ನಂತರ ಆಡಳಿತಕ್ಕೆ ಬಂದ ಸರ್ಕಾರವಾಗಲೀ ತಲೆಕೆಡಿಸಿಕೊಳ್ಳಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಸೊಲ್ಲೆತ್ತಲಿಲ್ಲ ಪರಿಣಾಮ ಕಳೆದ ಇಪ್ಪತ್ತೆರಡು ವರ್ಷಗಳಿಂದ ಗಾಳಿಯಂತ್ರಗಳು ತುಕ್ಕುಹಿಡಿಯುತ್ತಾ ನಿಂತಿವೆಯಲ್ಲದೆ, ಅದರ ಅಗತ್ಯ ಉಪಕರಣಗಳೆಲ್ಲವೂ ಕಳ್ಳರ ಪಾಲಾಗಿದೆ.

ಅಳಿದುಳಿದ ಕೆಲವು ಭಾಗಗಳು ಭೂಮಿ ಸೇರಿವೆ. ಇತರೆ ಕಡೆಗಳಲ್ಲಿ ಇಂತಹ ಯೋಜನೆಗಳು ಯಶಸ್ವಿಯಾದ ನಿದರ್ಶನಗಳಿವೆ. ಆದರೆ ತಲಕಾವೇರಿಯಲ್ಲಿರುವ ಗಾಳಿಯಂತ್ರಗಳ ಬಗ್ಗೆ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮರೆತೇ ಬಿಟ್ಟಿದ್ದಾರೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮಾತ್ರ ಈ ಗಾಳಿಯಂತ್ರಗಳು ತಲಕಾವೇರಿಯ ಬ್ರಹ್ಮಕಪಾಲಗಳಂತೆ ಗೋಚರಿಸಿ ಸೋಜಿಗವನ್ನುಂಟು ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+