ಈರುಳ್ಳಿ ಬೆಲೆ ಕುಸಿತ, ಯಾರಿಗೆ ಲಾಭ?

ಪಾಕಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದರಿಂಡ ಮಂಗಳವಾರ ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ಬೆಲೆ ಶೇ 50ರಷ್ಟು ಕುಸಿತ ಕಂಡಿದೆ. ಇದ್ದಕ್ಕಿದ್ದಂತೆ ಬೆಲೆ ಕುಸಿದಿರುವುದನ್ನು ಕಂಡು ರೈತರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಬೆಂಗಳೂರಿನಿಂದ ಮಲೇಷ್ಯಾ, ಬಾಂಗ್ಲಾದೇಶ ಹಾಗೂ ಇತರ ದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡಲಾಗುತ್ತದೆ. ರಫ್ತು ನಿಷೇಧ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ.
ಉತ್ತಮ ಗುಣಮಟ್ಟದ ಈರುಳ್ಳಿ ಮೂಟೆಗೆ (50 ಕೆ.ಜಿ) ಬೆಳಿಗ್ಗೆ ರೂ 3,000ವರೆಗೆ ಇದ್ದ ಬೆಲೆ ಸಂಜೆ ವೇಳೆಗೆ ರೂ 2,000ಗೆ ಇಳಿದಿದೆ. ಇದೇ ರೀತಿ ಮಧ್ಯಮ ಅಳತೆಯ ಈರುಳ್ಳಿ ಬೆಲೆ ಪ್ರತಿ ಮೂಟೆಗೆ ರು. 500ರಿಂದ 1,000ವರೆಗೆ ಕಡಿಮೆಯಾಗಿದೆ.
ರಫ್ತು ನಿಷೇಧದಿಂದಾಗಿ ಉತ್ತರ ಕರ್ನಾಟಕದಿಂದ ಬಂದ ಭಾರಿ ಈರುಳ್ಳಿ ಲೋಡ್ ಹಾಗೆ ಉಳಿದಿದೆ. ಅಲ್ಲದೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ ರೈತರಿಗೆ ನಿರಾಶೆಯಾಗಿದೆ. ಪಾಕಿಸ್ತಾನದ ಈರುಳ್ಳಿ ದೇಶದೆಲ್ಲೆಡೆ ಹರಿದುಬಂದರೆ, ಸ್ಥಳೀಯ ಈರುಳ್ಳಿಯ ಬೆಲೆ ಮತ್ತಷ್ಟು ಕುಸಿಯುವುದು ಖಚಿತ. ಇದು ಚಿಲ್ಲರೆ ವ್ಯಾಪಾರದ ಮೇಲೂ ಪರಿಣಾಮ ಬೀರಲಿದೆ ಎಂದು ಎಪಿಎಂಸಿ ಯಾರ್ಡ್ ನ ವ್ಯಾಪರಿಯೊಬ್ಬರು ಹೇಳುತ್ತಾರೆ.
'ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಿಂದ ಉತ್ತರ ಕರ್ನಾಟಕದಿಂದ ಬಂದ ಹಲವು ರೈತರು ಬೆಲೆ ಕುಸಿಯುತ್ತಿರುವುದನ್ನು ಕಂಡು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು. ಕೆಲವು ಟ್ರಕ್‌ಗಳ ಟಯರ್ ಪಂಕ್ಚರ್ ಮಾಡಿದರು. ಸಕಾಲದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿದ್ದರಿಂದ ಹೆಚ್ಚೇನೂ ಹಾನಿಯಾಗಲಿಲ್ಲ" ಎಂದು ಯಶವಂತಪುರದ ವ್ಯಾಪಾರಿಯೊಬ್ಬರು ಹೇಳಿದರು.
ಬೆಲೆ ಹೆಚ್ಚಳಕ್ಕೆ ಏನು ಕಾರಣ?: ಉತ್ತರ ಭಾರತದಲ್ಲಿ ಅದರಲ್ಲೂ ದೆಹಲಿಯಲ್ಲಿ ಸರಕು ವಾಹನಗಳ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿರುವುದು ಈರುಳ್ಳಿ ಬೆಲೆ ಮೇಲೆ ಪರಿಣಾಮ ಬೀರಿದ್ದರೆ, ಕರ್ನಾಟಕದಲ್ಲಿ ಬೆಳೆ ಏರಿಕೆ ಮೂಲ ಕಾರಣ ಅಕಾಲಿಕ ಮಳೆ. ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದ ಸಾಕಷ್ಟು ಬೆಳೆ ನಾಶವಾಗಿತ್ತು. ಅಳಿದುಳಿದ ಈರುಳ್ಳಿಯನ್ನು ಜಾಣತನದಿಂದ ಜೋಪಾನ ಮಾಡಿಟ್ಟುಕೊಂಡವರು. ತಡವಾಗಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಬೇಡಿಕೆ ಏರುತ್ತಿದ್ದಂತೆ ಈರುಳ್ಳಿ ಬೆಲೆ ತ್ವರಿತವಾಗಿ ದ್ವಿಗುಣವಾಗಿದೆ. [ಈರುಳ್ಳಿ]












Click it and Unblock the Notifications