ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ಬಿಜೆಪಿ ದೂರು

ಕೇಂದ್ರದ ಯುಪಿಎ ಸರಕಾರದ ವಿರುದ್ಧ ಬುಧವಾರ ನವದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಬಿಜೆಪಿ ಏರ್ಪಡಿಸಿದೆ. ಊ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನೆ ನಂತರ ಗಡ್ಕರಿ ಅಧ್ಯಕ್ಷತೆಯಲ್ಲಿ ಬಿಜೆಪಿ ನಾಯಕರು ಸಭೆ ಸೇರಲಿದ್ದು, ಕರ್ನಾಟಕದ ವಿದ್ಯಮಾನ ಚರ್ಚೆಗೆ ಬರಲಿದೆ. ರಾಷ್ಟ್ರಪತಿ ಅವರಿಗೆ ದೂರು ನೀಡಲು ಅಂತಿಮ ನಿರ್ಣಯ ಕೈಗೊಳ್ಳಲಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಗಣಿ ಲೂಟಿ ವಿರುದ್ಧ ಸರಕಾರಕ್ಕೆ ಚಾಟಿ ಬೀಸುತ್ತಲೇ ಬಂದಿರುವ ಭಾರದ್ವಾಜ್, ಇತ್ತೀಚೆಗೆ ಸರಕಾರಕ್ಕೆ ಎರಡು ಪ್ರತ್ಯೇಕ ಪತ್ರ ಬರೆದಿದ್ದರು. ಈ ಪತ್ರದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸಂಬಂಧ ಗಣಿ ರೆಡ್ಡಿಗಳ ವ್ಯವಹಾರದ ಮಾಹಿತಿ ಹಾಗೂ ಭೂ ಹಗರಣದಲ್ಲಿ ಶಾಮೀಲಾಗಿದೆ ಎಂಬ ಸರಕಾರದ ಬಗೆಗಿನ ದೂರಿನ ಕುರಿತು ಸಮಗ್ರ ವಿವರಣೆ ನೀಡುವಂತೆ ಸರಕಾರಕ್ಕೆ ರಾಜ್ಯಪಾಲರು ಪತ್ರ ಬರೆದಿದ್ದರು. ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರವನ್ನು ಬರೆದಿದ್ದರು.
ಈ ಮಧ್ಯೆ ಸರಕಾರ ಹಾಗೂ ರಾಜ್ಯಪಾಲರ ಮಧ್ಯೆ ತೀವ್ರ ವಾಗ್ದಾಳಿ ಕೂಡಾ ನಡೆದಿತ್ತು. ಇದರಿಂದ ಜಟಾಪಟಿ ಇನ್ನಷ್ಟು ತೀವ್ರತೆ ಪಡೆದುಕೊಂಡು ರಾಜ್ಯಪಾಲರು ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರು ಈ ಬಾರಿಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ನಿಲ್ಲಲಿ ಎಂಬ ಟೀಕೆಯನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದರು.
ಆದರೆ ನಿನ್ನೆ ಮತ್ತೆ ಸರಕಾರಕ್ಕೆ ಚಾಟಿ ಬೀಸಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಸರಕಾರದ ಪತ್ರ ತನಗೆ ತೃಪ್ತಿ ತಂದಿಲ್ಲ. ರಾಜ್ಯದಲ್ಲಿ ಕೋಟಿಗಟ್ಟಲೆ ವೌಲ್ಯದ ಅರಣ್ಯವನ್ನು ಅಕ್ರಮ ಗಣಿಗಾರಿಕೆಗೆ ಬಳಸಲಾಗುತ್ತಿದೆ. ಸರಕಾರದ ಸಚಿವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹರಿಹಾಯ್ದಿದ್ದರು. ಹೀಗಾಗಿ ಬಿಜೆಪಿ ರಾಷ್ಟ್ರಪತಿಗೆ ದೂರು ನೀಡಲು ನಿರ್ಧರಿಸಿದೆ.












Click it and Unblock the Notifications