ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಳಿಲ ಶಾಲೆ ಜಲಸಂರಕ್ಷಣೆ ಎಲ್ಲರಿಗೂ ಪಾಠ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Vidya Bodhini School, Sullia
ಮುಂದೊಂದು ದಿನ ಯುದ್ದ ನಡೆದರೆ ಅದು ನೀರಿಗಾಗಿಯೇ ನಡೆಯುತ್ತದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಇವತ್ತು ಎಲ್ಲಡೆ ಕಂಡು ಬರುತ್ತಿರುವ ಅಂತರ್ಜಲ ಕುಸಿತ ಸಾಕ್ಷಿಯಾಗಿದೆ. ಹಾಗಾದರೆ ಭವಿಷ್ಯದ ದಿನಗಳಲ್ಲಿ ಎದುರಾಗಲಿರುವ ಜಲಕ್ಷಾಮವನ್ನು ತಡೆಯಬೇಕಾದರೆ ನಾವು ಇಂದಿನಿಂದಲೇ ಜಲಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆ ತೋರಿಸಿಕೊಟ್ಟಿದೆ.

ಮಳೆ ಕೊಯ್ಲು ಅರಿವು : ಹಾಗೆ ನೋಡಿದರೆ ಮಳೆ ಕೊಯ್ಲುನೊಂದಿಗೆ ಜಲಸಂರಕ್ಷಣೆಯ ಬಗ್ಗೆ ಕಾರ್ಯಾಗಾರಗಳ ಮೂಲಕ ಇನ್ನಿತರೆ ಕಾರ್ಯಕ್ರಮಗಳೊಂದಿಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆಯಾದರೂ ಅವು ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ದುರಂತ. ಆದರೆ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿಗಳಲ್ಲಿ ಜಲಸಂರಕ್ಷಣೆಯ ಅರಿವು ಮೂಡಿಸಿದರೆ ಅದು ಮುಂದೆ ಪರಿಣಾಮಕಾರಿಯಾಗುತ್ತದೆ ಎಂಬುವುದನ್ನು ಅರಿತು ಜಲಸಂರಕ್ಷಣೆಯನ್ನು ಮಳೆ ಕೊಯ್ಲಿನಂತಹ ಪರಿಕಲ್ಪನೆಯೊಂದಿಗೆ ಕಲಿಕೆಯ ಒಂದು ವಿಷಯವಾಗಿ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಮಾಡಲಾಗುತ್ತಿದೆ.

ಕೇವಲ ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗದೆ ಪಠ್ಯದೊಂದಿಗೆ ಜಲಸಂರಕ್ಷಣೆಯಂತಹ ಬೋಧನೆಯನ್ನು ನೀಡುವ ಮೂಲಕ ಜಲಜಾಗೃತಿಯನ್ನು ಸದ್ದಿಲ್ಲದೆ ಮಾಡುತ್ತಿರುವ ಬಾಳಿಲದ ವಿದ್ಯಾಬೋಧಿನಿ ಶಾಲೆಯು ಸುಳ್ಯ ತಾಲೂಕಿನ ಬೆಳ್ಳಾರೆ ಬಳಿಯಿದೆ. ಬೆಳ್ಳಾರೆಯಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 5 ಕಿ.ಮೀ ತೆರಳಿದರೆ ಬಾಳಿಲ ಗ್ರಾಮ ಸಿಗುತ್ತದೆ. ಇಲ್ಲಿರುವ ವಿದ್ಯಾಬೋಧಿನಿ ಪ್ರೌಢಶಾಲೆಗೆ ಕಾಲಿಟ್ಟರೆ ನಮಗೆ ವಿಶಿಷ್ಟ ಅನುಭವವಾಗುತ್ತದೆ.

ಶಾಲೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ಬರೆಯಲಾದ "ನೀರ ಹನಿಗೆ ನೂರು ಬೆಲೆ" ಎಂಬ ಸಂದೇಶ ನೀರಿಗಿರುವ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತದೆ. ಶಾಲಾ ಕಾಂಪೌಂಡ್ ಒಳಗಿನ ಕಟ್ಟಡದ ಗೋಡೆಯಿಂದ ಪ್ರಾರಂಭವಾಗಿ ಗಿಡ, ಮರಗಳು, ಅಲಂಕಾರಿಕ ಹೂಗಿಡಗಳು ಕೂಡ ಮಾಹಿತಿಯ ಕಣಜಗಳಾಗಿವೆ. ಶಾಲಾ ಮುಂದಿರುವ ಅಲಂಕಾರಿಕ ಸಸ್ಯ ಕೇವಲ ಸಸ್ಯವಾಗಿರದೆ ಅದು ಗಣಿತದ ಸೂತ್ರ ಹೇಳುತ್ತದೆ. ಅಷ್ಟೇ ಅಲ್ಲ, ತ್ರಿಕೋನ, ಚೌಕ, ಆಯತ, ವಜ್ರಾಕೃತಿ, ವೃತ್ತ ಮೊದಲಾದವುಗಳೆಲ್ಲವೂ ಅಲಂಕಾರಿಕ ಸಸ್ಯಗಳಿಂದಲೇ ನಿರ್ಮಾಣವಾಗಿರುವುದು ವಿಸ್ಮಯ ಮೂಡಿಸುತ್ತದೆ.

ಗಣಿತದ ಮೂಲ ಕ್ರಿಯೆಗಳ ನಡುವೆ ಪರ್ಜನ್ಯ ಮಾಪಕವಿದ್ದು, ದಿನನಿತ್ಯದ ಮಳೆಯ ಪ್ರಮಾಣವನ್ನು ಅಳೆದು ವಿದ್ಯಾರ್ಥಿಗಳು ದಾಖಲಿಸುತ್ತಾರೆ. ಆಯಾಯ ರಾಶಿಗಳಿಗೆ ಸಂಬಂಧಪಟ್ಟ ಗಿಡಗಳನ್ನು ನೆಟ್ಟು ನಿರ್ಮಿಸಲಾದ ರಾಶಿವನ, ಗ್ರಹಗಳ ಸ್ಥಾನಕ್ಕನುಗುಣವಾಗಿ ನೆಡಲಾದ ನವಗ್ರಹವನ ಗಮನಸೆಳೆಯುತ್ತದೆ.

ಹಲವು ಮಾಹಿತಿಗಳ ಆಗರ: ಗೋಡೆಗಳಲ್ಲಿ ಕೈ ಗಡಿಯಾರಕ್ಕೆ ಸರಿಯಾಗಿ ವಿಶ್ವದ ಇತರೆ ರಾಷ್ಟ್ರದ ಸಮಯವನ್ನು ತಿಳಿಸುವ ಜಾಗತಿಕ ಗಡಿಯಾರ ಹಾಗೂ ಗಣಿತದ ವಿವಿಧ ಸೂತ್ರಗಳನ್ನು ಪರಿಚಯಿಸುವ ಸಂಖ್ಯಾ ಗಡಿಯಾರ, ಕ್ರಾಂತಿ ಚಕ್ರ, ಸೌರವ್ಯೂಹ, ಸಂಚಾರ ಸಂಕೇತ, ಮಳೆ ದಾಖಲೆಯ ವಿವರಗಳು ಸೇರಿದಂತೆ ವಿವಿಧ ಉಪಯುಕ್ತ ಮಾಹಿತಿಗಳನ್ನು ಬರೆಯಲಾಗಿದೆ.

ಜ್ಞಾನಾರ್ಜನೆಗೆ ಉಪಯುಕ್ತ ಗ್ರಂಥಾಲಯ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ವೈಜ್ಞಾನಿಕ ಪ್ರಯೋಗ ಮಾಡಲು ಪ್ರಯೋಗಾಲಯ, ವಿದ್ಯಾರ್ಥಿಗಳೇ ಸಂಗ್ರಹಿಸಿದ "ವಿದ್ಯಾ ಪರಂಪರಾ" ಎಂಬ ವಸ್ತು ಸಂಗ್ರಹಾಲಯವಿದ್ದು, ಇಲ್ಲಿ ಅಮೂಲ್ಯವಾದ ಅಳಿದು ಹೋದ, ಅಳಿವಿನಂಚಿನಲ್ಲಿರುವ ಮಣ್ಣಿನ ಇತರೆ ಲೋಹದ ಅಪರೂಪದ ಪರಿಕರಗಳನ್ನು ನಾವು ಕಾಣಬಹುದು. [ಶಾಲೆ]

ಶಾಲೆಯಲ್ಲಿ ಜಲಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭೂಮಿಗೆ ಬೀಳುವ ಮಳೆಯ ಒಂದೊಂದು ಹನಿಯೂ ಅಮೂಲ್ಯವಾಗಿದ್ದು, ಅದನ್ನು ಇಂಗಿಸುವ ಮೂಲಕ ಅಂತರ್ಜಲವನ್ನು ವೃದ್ದಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪಾಠವಾಗಿದೆ. ಶಾಲಾ ಸಂಕೀರ್ಣದಲ್ಲಿ ಬಿದ್ದ ಒಂದೊಂದು ನೀರಿನ ಹನಿಯೂ ಇಂಗುವಂತೆ ವಿದ್ಯಾರ್ಥಿಗಳು ಮಾಡುತ್ತಾರೆ. ಶಾಲೆಯ ಛಾವಣಿ ನೀರನ್ನು ಪೈಪ್ ಮೂಲಕ ಶುದ್ಧೀಕರಿಸಿ ಕೊಳವೆ ಬಾವಿಗೆ ಮರುಪೂರಣ ಮಾಡುವ ಕಾರ್ಯವೂ ನಡೆಯುತ್ತಿದೆ.

ನಮ್ಮ ನೀರು ನಮಗೆ: ಮತ್ತೊಂದೆಡೆ ಶಾಲೆಯ ಮುಂಭಾಗದಲ್ಲಿ ಕೃತಕ ಹೊಂಡವನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಆದ ನೀರಿನ ಮಟ್ಟದ ಸುಧಾರಣೆಯನ್ನು ವಿವರಿಸುವ ವಿವರಗಳು ಮತ್ತು ಪ್ರಾಯೋಗಿಕ ಮಾದರಿಗಳಿವೆ. ಸಂಗ್ರಹಿಸಿದ ಛಾವಣಿ ನೀರನ್ನು ಸೋಸಿ ಕೊಳವೆ ಬಾವಿಗೆ ನೇರವಾಗಿ ಹರಿಸುವ ಮೂಲಕ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ.

ಶಾಲೆಯ ಆವರಣದಲ್ಲಿ ನೆಡಲಾದ ಪ್ರತಿ ಗಿಡಕ್ಕೂ ಇಂಗು ಗುಂಡಿಗಳನ್ನು ತೆಗೆದು ನೆಟ್ಟ ಗಿಡಗಳ ಬುಡದಲ್ಲಿ ತೇವಾಂಶ ಉಳಿಯುವಂತೆ ನೊಡಿಕೊಳ್ಳಲಾಗುತ್ತಿದೆ.ಪಾಠದೊಂದಿಗೆ ಗಿಡಮರ, ಮಣ್ಣು, ನೀರಿನೊಂದಿಗೆ ನಿರಂತರ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳು ಮಳೆಕೊಯ್ಲು, ಜಲಸಂರಕ್ಷಣೆ ಮುಂತಾದ ವಿಚಾರಗಳ ಬಗ್ಗೆ ಹೆಚ್ಚಿನ ಅರಿವು ಪಡೆದು ಜಲಸಾಕ್ಷರರಾಗುವುದರೊಂದಿಗೆ "ನಮ್ಮ ನೀರು ನಮಗೆ" ಎಂಬ ಶಾಲೆಯ ಧ್ಯೇಯವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವುದು ಶಾಲಾ ವೃಂದದವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದರೆ ಅತಿಶಯೋಕ್ತಿಯಾಗಲಾರದು.

English summary
Vidya Bodhini high school in Balila, Sullia taluk, Dakshina Kannada district is implemented Rain Water Harvesting method to conserve and protect water in School. Beside this school also has Rashivana, museum of watch and old metal sculptures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X