ಒಂದೇ ವೇದಿಕೆಯಲ್ಲಿ ಬಿಎಸ್ ವೈ, ಕುಮಾರಸ್ವಾಮಿ

ಮುಖ್ಯಮಂತ್ರಿಗಳ ವೇದಿಕೆಯಲ್ಲೇ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರ ಕುಟುಂಬ ಅಕ್ರಮವಾಗಿ ಜಮೀನು ಗಳಿಸಿದೆ. ವಾರದೊಳಗೆ ಜಮೀನನ್ನು ಸರಕಾರಕ್ಕೆ ಹಿಂದಿರುಗಿಸದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು. ದೇವೇಗೌಡರ ಕುಟುಂಬ ಅಕ್ರಮವಾಗಿ ಭೂಮಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಸಾಬೀತುಪಡಿಸಿದರೆ, ವಾರದೊಳಗೆ ನಮ್ಮ ಎಲ್ಲ ಭೂಮಿಯನ್ನು ಸರಕಾರಕ್ಕೆ ನೀಡುವುದಾಗಿ ಕುಮಾರಸ್ವಾಮಿ ಹೇಳಿದರು.
ತಪ್ಪು ಮಾಡಿದ್ದರೆ ದೇವೇಗೌಡರು ಸೇರಿದಂತೆ ಕುಟುಂಬದ ಸದಸ್ಯರು ಸೇರಿದಂತೆ ಜೈಲಿಗೆ ಹೋಗಲು ರೆಡಿಯಾಗಿದ್ದೇವೆ. ಬರೀ ಸುಳ್ಳು ಆಪಾದನೆ ಮಾಡುವುದನ್ನು ಬಿಡುವುದು ಒಳ್ಳೆಯದು ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮಾತಿಗಿಳಿಯುವ ಮುಂಚಿತವಾಗಿಯೇ ಕುಮಾರಸ್ವಾಮಿ ವೇದಿಕೆಯಿಂದ ನಿರ್ಗಮಿಸಿದ್ದು ವಿಶೇಷವಾಗಿತ್ತು.
ನಂತರ ಮಾತನಾಡಿದ ಯಡಿಯೂರಪ್ಪ, ಹಳೆ ರಾಗವನ್ನೆ ಹಾಡಿದರು. ಪ್ರತಿಪಕ್ಷಗಳು ವಿನಾಕಾರಣ ಸರಕಾರದ ವಿರುದ್ಧ ಆರೋಪ ಮಾಡುತ್ತಿವೆ. ಇದಕ್ಕೆ ನಾವು ಬಗ್ಗುವುದಿಲ್ಲ. ಭೂ ಹಗರಣಗಳನ್ನು ಬಯಲಿಗೆಳೆಯಲು ಸರಕಾರ ಆರಂಭಿಸಿದೆ. ಎಲ್ಲ ಹುಳುಕುಗಳನ್ನು ಹೊರಗೆಳೆಯಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಸಿದ್ಧಗಂಗಾ ಮಠ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.











Click it and Unblock the Notifications