ರೂಪದರ್ಶಿ ಕೀರ್ತನಾಗೆ ಕಿರಾತಕರ ಕಿರುಕುಳ

ಕೀರ್ತನಾ ಹೇಳಿದಂತೆ ನಡೆದ ಘಟನೆ ವಿವರ ಹೀಗಿದೆ: ಶುಕ್ರವಾರ ಸಂಜೆ ಇನ್ನೂ 7 ಗಂಟೆ ದಾಟಿರಲಿಲ್ಲ. ಎನ್ ಜಿವಿಯ ಬಿಲ್ಡರ್ಸ್ ಕ್ಲಬ್ ನಿಂದ ಶಬ್ದ ಎಷ್ಟು ಜೋರಾಗಿತ್ತೆಂದರೆ ನಮ್ಮ ಮೊಬೈಲ್ ರಿಂಗ್ ಆದ್ರೂ ಕೇಳಿಸುತ್ತಿರಲಿಲ್ಲ. ಈ ಅಬ್ಬರವನ್ನು ಅವಡುಗಚ್ಚಿ ಮೂರು ಗಂಟೆಗಳ ಕಾಲ ಸಹಿಸಿಕೊಂಡೆ. ಆದರೆ, ಸುಮಾರು 10 ಗಂಟೆ ನಂತರ ಕ್ಲಬ್ ಗೆ ಹೋದೆ. ಅಲ್ಲಿ ಸುಮಾರು 100ಕ್ಕೂ ಹೆಚ್ಚು ಪುರುಷರು ಕುಣಿದಾಡುತ್ತಿದ್ದರು. ಸೌಂಡ್ ತಗ್ಗಿಸುವಂತೆ ಮ್ಯಾನೇಜರ್ ಗೆ ಮನವಿ ಮಾಡಿಕೊಂಡೆ. ಅದರಂತೆ, ಆತ ಸೌಂಡ್ ಕಮ್ಮಿ ಮಾಡಿದ.
ನಾನು ಇನ್ನೇನು ಹೊರಡಬೇಕು ಅಷ್ಟರಲ್ಲಿ 10-20 ಜನ ಮಧ್ಯವಯಸ್ಕರ ದೃಢಕಾಯವುಳ್ಳ ಯುವಕರು ನನ್ನನ್ನು ಸುತ್ತುವರೆದರು. ಎಲ್ಲರೂ ಬೆಲೆಬಾಳುವ ವಾಚು ಹಾಗೂ ಡ್ರೆಸ್ ಹಾಕಿಕೊಂಡಿದ್ದರು. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದರು. ಉತ್ತರ ಭಾರತೀಯಳಾದ ನೀನು ಇಲ್ಲಿರಲು ನಾಲಾಯಕ್ ಎಂದು ದೂಡಿದರು. ನಾನು ಈ ಕ್ಲಬ್ ನ ಸದಸ್ಯೆ ಎಂದಾಗ ಪಿತ್ತನೆತ್ತಿಗೇರಿದಂತೆ ಆಡಿದರು.
ಹತ್ತಿರ ಬರದಂತೆ ತಡೆ ಒಡ್ಡಿದಾಗ, ಹತ್ತಿರ ಬರುತ್ತೀವಿ, ರೇಪ್ ಮಾಡಿ ಮೋರಿಗೆ ಎಸೆದುಬಿಡುತ್ತೀವಿ ಹುಷಾರ್ ಎಂದು ಗದರಿಸಿದರು. ತಕ್ಷಣ ಕೀರ್ತನಾ ರಕ್ಷಣೆಗಾಗಿ ಪೊಲೀಸರಿಗೆ ಕರೆ ಮಾಡಿದರೆ, ಕೋರಮಂಗಲ ಪೊಲೀಸರು ಇದು ನಮಗೆ ಸಂಬಂಧಿಸಿಲ್ಲ, ಆಡುಗೋಡಿ ಸ್ಟೇಷನ್ ಗೆ ಕಾಲ್ ಮಾಡಿ ಅಂದು ಬಿಟ್ಟರು. ಅಷ್ಟರಲ್ಲಿ ಗುಂಪಿನಿಂದ ನನ್ನ ಬಳಿ ಬಂದ ಕೆಲವರು (ಅವರಲ್ಲಿ ಒಬ್ಬ ಹುಡುಗಿ ಕೂಡಾ ಇದ್ದಳು) ನನ್ನ ಮೊಬೈಲ್ ಕಸಿದುಕೊಂಡು ಕೆನ್ನೆ, ಎದೆ, ಸೊಂಟ ಎಲ್ಲೆಡೆ ಹೊಡೆದರು. ಮತ್ತಿಬ್ಬರು ನನ್ನ ತೋಳು ಹಾಗೂ ಸೊಂಟ ಹಿಡಿದುಕೊಂಡು ಕ್ಲಬ್ ನಿಂದ ಹೊರಗೆಳೆದು ಹಾಕಿದರು. ನಂತರ ಹತ್ತಿರದಲ್ಲಿದ್ದ ಎಟಿಎಂಗೆ ಎಳೆದೊಯ್ದು ಬಟ್ಟೆ ಹರಿದು ಹಾಕಲು ನೋಡಿದರು. ನಾನು ಶಕ್ತಿ ಮೀರಿ ಕೂಗಿಕೊಂಡೆ.
ಅಷ್ಟರಲ್ಲಿ ಬೀಟ್ ಪೊಲೀಸರು ಬಂದು ನನ್ನನ್ನು ಅವರಿಂದ ಬಿಡಿಸಿದರು. ಆದರೆ, ಅಲ್ಲಿಂದ ಆಡುಗೋಡಿ ಪೊಲೀಸ್ ಠಾಣೆ ಹೋದ ನನಗೆ ಅಲ್ಲೂ ನ್ಯಾಯ ಸಿಗಲಿಲ್ಲ. ನನ್ನನ್ನು ವೈದ್ಯಕೀಯ ಪರೀಕ್ಷೆಗೂ ಕಳಿಸಲಿಲ್ಲ. ದುಂಡಾವರ್ತನೆ ಮಾಡಿ ಕಿರುಕುಳ ನೀಡಿದವರ ವಿರುದ್ಧ FIR ದಾಖಲಿಸಲೇ ಇಲ್ಲ. ಎಸ್ ಐ ನಾಗರಾಜ್ ನನ್ನನ್ನು ಬೈಯತೊಡಗಿದರು. ಬಿಲ್ಡಿಂಗ್ ನಲ್ಲಿ ಯಾರಿಗೂ ಆಗದ ತೊಂದರೆ ನಿನಗೆ ಮಾತ್ರ ಏಕೆ ಆಗುತ್ತೇ ಎಂದು ಪ್ರಶ್ನಿಸಿದರು. ನಾನು ಅಸಹಾಯಕಳಾಗಿ ಅಲ್ಲಿಂದ ಹೊರ ನಡೆದೆ ಎಂದು ಬೆಂಗಳೂರು ಮಿರರ್ ಜೊತೆ ಮಾತನಾಡುತ್ತಾ ಕೀರ್ತನಾ ತನ್ನ ಗೋಳಿನ ಕಥೆ ಹೇಳಿದ್ದಾರೆ.
2007ನೇ ಸಾಲಿನ ಫೆಮಿನಾ ಮಿಸ್ ಸೌಥ್ (ಬ್ಯೂಟಿಫುಲ್ ಸ್ಕಿನ್) ಪ್ರಶಸ್ತಿ ಗೆದ್ದಿರುವ ಚೆಲುವೆ ಕೀರ್ತನಾ ಕೃಷ್ಣನ್, ನ್ಯಾಷನಲ್ ಗೇಮ್ಸ್ ವಿಲೇಜ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದಾರೆ. ಎನ್ ಜಿವಿ ಕ್ಲಬ್ ನ ಸದಸ್ಯರಾಗಿದ್ದಾರೆ. ಟೈಟಾನ್, ಬರ್ಗರ್ ಪೈಂಟ್, ಬ್ರೂಕ್ ಬಾಂಡ್ ಮುಂತಾದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ನಾವು ಕ್ಲಬ್ ಡೇ ಆಚರಿಸುತ್ತಿದ್ದೆವು. ಮ್ಯೂಸಿಕ್ ವಾಲ್ಯೂಂ ಕಮ್ಮಿ ಮಾಡಲು ಆಕೆ ಕೇಳಿದರು ಕಮ್ಮಿ ಮಾಡಿದೆ ಅಷ್ಟೇ. ಆಕೆ ಮಾಡಿದ ಆರೋಪದ ಬಗ್ಗೆ ನನಗೇನು ಗೊತ್ತಿಲ್ಲ. ಪೊಲೀಸ್ ಕಂಪ್ಲೈಟ್ ಇದ್ರೆ ತನ್ನಿ' ಎನ್ನುತ್ತಾರೆ ಕ್ಲಬ್ ಮ್ಯಾನೇಜರ್ ಸುಬ್ರಮಣ್ಯ. ಈ ಪ್ರಕರಣ ಸದ್ಯಕ್ಕೆ ಜಂಟಿ ಆಯುಕ್ತ ಆಲೋಕ್ ಕುಮಾರ್ ಹಾಗೂ ಡಿಸಿಪಿ ಸೊನಿಯಾ ನಾರಂಗ್ ಅವರ ಸಮಕ್ಷಮಕ್ಕೆ ಬಂದಿದೆ. ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications