ನನ್ನನ್ನು ಬೆಂಬಲಿಸಿದ ಮಠಾಧೀಶರಿಗೆ ಚಿರಋಣಿ

ಎಚ್ ಎಎಲ್ ಏರ್ ಪೋರ್ಟ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ನನ್ನನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಬಾರದು ಎಂದು ನಾಡಿನ ಅನೇಕ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಮಠಾಧೀಶರು ಹಾಗೂ ಪಕ್ಷದ ವರಿಷ್ಠರ ಆಶೀರ್ವಾದದಿಂದ ನಾನು ಮತ್ತೆ ಮುಖ್ಯಮಂತ್ರಿಯಾಗಿ ಬೆಂಗಳೂರಿಗೆ ಹಿಂತಿರುಗಿರುವೆ ಎಂದು ಸಂಭ್ರಮದಿಂದ ಹೇಳಿಕೊಂಡರು.
ಪ್ರತಿಪಕ್ಷಗಳು ವಿನಾಕಾರಣ ಸುಳ್ಳು ಆಪಾದನೆ ಮಾಡುವ ಗೊಂದಲ ಸೃಷ್ಟಿಸಿವೆ. ಸರಕಾರ ಉರುಳಿಸುವ ಕೆಲಸಕ್ಕೆ ಕೈಹಾಕದೆ, ಸರಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಕಾರ ನೀಡಿ. ಈ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟುವುದಾದರೆ, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ನಿಮ್ಮ ಶಕ್ತಿ ತೋರಿಸಿ ಎಂದು ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.
ದೇಶದ ಪ್ರತಿಷ್ಠಿತ ಪತ್ರಿಕೆಯಾದ ಇಂಡಿಯಾ ಟುಡೇ ಮಾಡಿದ ಸರ್ವೆಯೊಂದರಲ್ಲಿ ಕರ್ನಾಟಕ ಹಣಕಾಸು ಸ್ಥಿತಿ ಸುಭದ್ರವಾಗಿದ್ದು, ಏಳನೇ ಸ್ಥಾನದಲ್ಲಿದೆ ಎಂದು ಹೇಳಿದೆ, ವಿನಾಕಾರಣ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳು ಉತ್ತರಿಸುತ್ತವೆಯೇ ಎಂದು ಪ್ರಶ್ನಿಸಿದ ಅವರು, ಮುಖ್ಯವಾಗಿ ಜೆಡಿಎಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ಅವರಿಗೆ ಜೀವದಾನ ನೀಡಿರುವ ಬಿಜೆಪಿ ಹೈಕಮಾಂಡ್, ಕೆಲ ಷರತ್ತು ವಿಧಿಸಿದೆ. ಮುಖ್ಯವಾಗಿ ಪಾರದರ್ಶಕ ಆಡಳಿತ ನೀಡಬೇಕು, ಪಕ್ಷದ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕುಟುಂಬ ಸದಸ್ಯರನ್ನು ಆಡಳಿತದಿಂದ ದೂರ ಇಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಇದೆಲ್ಲಕ್ಕೂ ಒಪ್ಪಿಕೊಂಡಿರುವ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಎಂತಹ ಆಡಳಿತ ನೀಡುವರು ಎನ್ನುವುದು ಕಾಲ ಉತ್ತರಿಸಬೇಕಿದೆ.
ಯಡಿಯೂರಪ್ಪ ಅವರ ಕುರ್ಚಿ ಯುದ್ಧ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಬಳ್ಳಾರಿ ರೆಡ್ಡಿಗಳು ಕ್ಯಾತೆ ತೆಗೆದಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಜನಾರ್ದನರೆಡ್ಡಿ, ಸ್ವಾಮೀಜಿಗಳಿಗೆ ರಾಜಕೀಯ ಏಕೆ ಬೇಕು? ಒಬ್ಬ ಮನುಷ್ಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಧರ್ಮವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಇನ್ನೊಂದು ರಂಪಾಟ ಬಿಜೆಪಿಯಲ್ಲಿ ಶುರುವಾಗಲಿದೆ ಎಂಬ ಸೂಚನೆಯನ್ನು ಇಂದು ರೆಡ್ಡಿ ನೀಡಿದ್ದಾರೆ.












Click it and Unblock the Notifications