ಯುಪಿಎಯ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ನಕ್ಸಲರು, ಗಿಲಾನಿ, ಆರುಂಧತಿರಾಯ್ ಅವರಂತಹ ರಾಷ್ಟ್ರ ವಿರೋಧಿಗಳ ವಿರುದ್ದ ಅಸಹಾಯಕ ವರ್ತನೆ ತೋರುತ್ತಿರುವ ಕೇಂದ್ರ ಸರಕಾರ ಆರ್ಎಸ್ಎಸ್ ನಂತಹ ದೇಶಭಕ್ತ ಸಂಘಟನೆಗೆ ಕಿರುಕುಳ ನೀಡುತ್ತಿದೆ. ಹಿಂದುತ್ವ ಮತ್ತು ಹಿಂದೂ ಸಂಘಟನೆಗಳ ಬಗ್ಗೆ ದುರುದ್ದೇಶಪೂರಿತ ಅಪಪ್ರಚಾರವನ್ನು ಖಂಡಿಸಿ ಇದೆ ತಿಂಗಳು 10ರಂದು ದೇಶಾದ್ಯಂತ ಎಲ್ಲಾ ರಾಜ್ಯದ ರಾಜಧಾನಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿರ್ಧರಿಸಿದೆ.
ಕೇಂದ್ರದ ಅಪಪ್ರಚಾರ ಖಂಡಿಸಿ ಅಂದು ರಾಷ್ಟ್ರವ್ಯಾಪಿ ಎರಡು ತಾಸುಗಳ ಕಾಲ ಧರಣಿ ನಡೆಯಲಿದ್ದು, ಸಂಘಟನೆಯ ಆಯಾ ಭಾಗದ ಪ್ರಮುಖರು ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಇತ್ತೀಚಿಗೆ ಸಂಘಟನೆಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರಕಾರದ ಮೂಗಿನ ನೇರಕ್ಕೆ ಭಯೋತ್ಪಾದನೆ ನಡೆಯುತ್ತಿದ್ದರೂ, ಮತ ಬ್ಯಾಂಕ್ ಉಳಿಸಿಕೊಳ್ಳುವ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಓಲೈಸಲು ದೇಶಪ್ರೇಮಿ ಸಂಘಟನೆ ಬಗ್ಗೆ ಅಪಪ್ರಚಾರಕ್ಕೆ ಕೇಂದ್ರ ಕೈಹಾಕಿರುವುದು ಖಂಡನೀಯ ಎಂದು ಸಂಘಟನೆಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾದವ್ ಹೇಳಿಕೆ ನೀಡಿದ್ದಾರೆ.
ಹಿಂದೂ ಭಯೋತ್ಪಾದನೆ ಎನ್ನುವುದು ಇದ್ದರೆ ದಾಖಲೆ ಸಮೇತ ಕಾಂಗ್ರೆಸ್ ಅದನ್ನು ಬಹಿರಂಗ ಪಡಿಸಲಿ. ಸಂಘಟನೆ ದೇಶದ ಒಳಿತು ಮತ್ತು ಒಗ್ಗಟ್ಟಿಗೆ ದುಡಿಯುತಿದ್ದು, ಭಯೋತ್ಪಾದನೆ ಮುಕ್ತ ಭಾರತದ ಆಶಯ ಹೊಂದಿದೆ. ಸಂಘಟನೆಯ ಅಂತಃ ಶಕ್ತಿಯನ್ನು ಕುಗ್ಗಿಸುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕುತ್ತಿದೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಮುಸಲ್ಮಾನರು ಸೇರಿದಂತೆ ಎಲ್ಲಾ ಜನತೆಯ ಸಹಕಾರ ಮತ್ತು ಬೆಂಬಲವನ್ನು ಅಪೇಕ್ಷಿಸಿ ಡಿಸೆಂಬರ್ ನಲ್ಲಿ ದೇಶಾದ್ಯಂತ ಆರ್ಎಸ್ಎಸ್ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಲಿದೆ ಎಂದು ರಾಮ್ ಮಾಧವ ತಿಳಿಸಿದ್ದಾರೆ.












Click it and Unblock the Notifications