ಕಿತ್ತಾಟದ ಮಧ್ಯೆಯೂ ಬುಧವಾರ ಸಂಪುಟ ವಿಸ್ತರಣೆ

ಪಕ್ಷದೊಳಗೆ ಸ್ಫೋಟಗೊಂಡಿರುವ ಅಸಮಾಧಾನದ ಜ್ವಾಲೆ ಮತ್ತು ರಾಜ್ಯ ಹೈಕೋರ್ಟ್ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನ.8ಕ್ಕೆ ಮುಂದೂಡಿದ್ದರಿಂದ ನಾಳೆ(ಬುಧವಾರ) ಸಂಪುಟ ವಿಸ್ತರಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಮಂಗಳವಾರ ಮಧ್ಯಾಹ್ನ ಹೇಳಿದ್ದರು. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಗಂಟೆಗೊಂದು ವರದಿಗಳು ಬರುತ್ತಿರುವ ಮಧ್ಯೆಯೇ ನ.3 ಬುಧವಾರದಂದು ರಾಜಭವನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸರಕಾರ ಎಲ್ಲ ಮಾಧ್ಯಮಗಳಿಗೆ ಫ್ಯಾಕ್ಸ್ ಮೂಲಕ ಸಂದೇಶ ರವಾನಿಸಿದೆ.
11 ಮಂದಿ ಬಿಜೆಪಿ ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೇವಲ 31 ಮಂದಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕು ಎಂದು ಜೆಡಿಎಸ್ ಕ್ಯಾತೆ ತೆಗೆದಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಘೋಷಣೆ ಮಾಡಿದಂತೆ ಪಕ್ಷೇತರ ಶಾಸಕರ ವರ್ತೂರು ಪ್ರಕಾಶ್, ಸುರಪುರ ಶಾಸಕ ರಾಜೂಗೌಡ, ಚಿಕ್ಕಮಗಳೂರು ಶಾಸಕ ಸಿಟಿ ರವಿ ಮತ್ತು ತುಮಕೂರು ನಗರ ಶಾಸಕ ಸೊಗಡು ಶಿವಣ್ಣ ಅವರಿಗೆ ಸಂಪುಟ ಸ್ಥಾನ ನೀಡುವುದು ಖಚಿತವಾಗಿತ್ತು.
ಆದರೆ, ಕಾನೂನು ಸಮಸ್ಯೆ ಎದುರಾಗಿದ್ದರಿಂದ ನಾಲ್ವರಲ್ಲಿ ವರ್ತೂರು ಪ್ರಕಾಶ್, ರಾಜೂಗೌಡ ಅವರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ವರಿಷ್ಠರು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಬಿಜೆಪಿಯ ನಾಲ್ಕೈದು ಶಾಸಕರು ಮಂತ್ರಿಗಿರಿಗಾಗಿ ಪಟ್ಟು ಹಿಡಿದಿದ್ದಾರೆ. ಮುಖ್ಯವಾಗಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ್ ಬೆಲ್ಲದ್ ಮಂತ್ರಿಯನ್ನಾಗಿ ಮಾಡದಿದ್ದರೆ ಪ್ರಾಧಿಕಾರಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಮಾಲೂರು ಶಾಸಕ ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಮಂತ್ರಿಗಿರಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹಿಂದುಳಿದ ವರ್ಗದವರನ್ನು ಕಡೆಗಣಿಸಲಾಗಿದೆ. ಭೋವಿ ಜನಾಂಗಕ್ಕೆ ಆಧ್ಯತೆ ಇಲ್ಲ. ಸಮಾಜ ಜನ ನನ್ನನ್ನು ಪ್ರಶ್ನಿಸುತ್ತಾರೆ. ಹೀಗಾಗಿ ಮಂತ್ರಿ ಮಂಡಲದಲ್ಲಿ ಪರಿಶಿಷ್ಟರಿಗೆ ಸ್ಥಾನ ನೀಡಬೇಕು ಎಂದು ಕುಮಾರಸ್ವಾಮಿ ಮತ್ತು ಚಂದ್ರಪ್ಪ ಅವರು ಯಡಿಯೂರಪ್ಪ ಅವರ ಮೇಲೆ ತೀವ್ರ ಒತ್ತಡ ಹಾಕಿದ್ದಾರೆ. ಶೃಂಗೇರಿ ಶಾಸಕ ಜೀವರಾಜ್ ಮಂತ್ರಿಗಿರಿಗಾಗಿ ಈಗಾಗಲೇ ಮುಖ್ಯ ಸಚೇತಕ ಸ್ಥಾನ ರಾಜೀನಾಮೆ ನೀಡಿದ್ದಾರೆ.












Click it and Unblock the Notifications