ಸುಳ್ಳು ಈಶ್ವರಪ್ಪ ಅವರ ಮನೆ ದೇವರು : ಸಿದ್ದು

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವನ್ನು ಅಸ್ಥಿರಗೊಳಿಸಲು ಬಂಡಾಯವೆದ್ದಿದ್ದ ಭಿನ್ನರಿಗೆ ಚೆನ್ನೈನಲ್ಲಿ ವಾಸ್ತವ ಹೂಡಿದ್ದ ಪಂಚತಾರಾ ಹೊಟೇಲಿನ ಬಿಲ್ಲನ್ನು ಕೇಂದ್ರದ ಸಚಿವರೊಬ್ಬರ ಅಳಿಯ ಸಿದ್ದಾರ್ಥ ಎಂಬುವರು ಪಾವತಿಸಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಅವರಿಗೆ ಸುಳ್ಳೇ ಮನೆ ದೇವರಾಗಿ ಬಿಟ್ಟಿದೆ, ಸುಳ್ಳು ಹೇಳುವುದಕ್ಕೆ ಒಂದು ಮಿತಿಯಿರಬೇಕು ಎಂದು ಪ್ರತಿಕ್ರಿಯಿಸಿದರು.
ಚೆನ್ನೈನ ಪಂಚತಾರಾ ಹೋಟೆಲ್‌ಗೆ ಭಿನ್ನರು ಪಾವತಿಸಿದ ಬಿಲ್ಲಿನ ಮೂಲ ಪ್ರತಿಯನ್ನು ಬಿಡುಗಡೆ ಮಾಡಿದ ಸಿದ್ದರಾಮಯ್ಯ, ರಾಜ್ಯ ಕಂಡ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಆಗಿದ್ದು, ಒಂದು ಪಕ್ಷದ ಅಧ್ಯಕ್ಷರಾಗಿರುವ ಈಶ್ವರಪ್ಪರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಸುಳ್ಳು ಹೇಳುವುದು ಅವರ ಸ್ಥಾನಕ್ಕೆ ಗೌರವ ತರುವಂತಹದಲ್ಲ ಎಂದು ಟೀಕಿಸಿದರು.
ಸಿದ್ದುಗೆ ಯೋಗ್ಯತೆ ಇಲ್ಲ : ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ದರಾಮಯ್ಯನವರಿಗೆ ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಹಾಸನಾಂಬೆಯ ದರ್ಶನ ಮಾಡಲು ಹಾಸನಕ್ಕೆ ಆಗಮಿಸಿದ್ದ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಯಾರೆಂದು ಕೇಂದ್ರದ ಕಾಂಗ್ರೆಸ್ ನಾಯಕರಿಗೂ ಅರ್ಥವಾಗಿದೆ ಎಂದು ಟೀಕಿಸಿದರು. ಆಪರೇಷನ್ ಕಮಲದ ಮೂಲ ಪುರುಷ ಸಿದ್ದರಾಮಯ್ಯ ಎಂದು ಟೀಕಾ ಪ್ರಹಾರ ನಡೆಸಿದ ಈಶ್ವರಪ್ಪ, ವಿರೋಧ ಪಕ್ಷದ ನಾಯಕನ ಸ್ಥಾನ ಕೊಡದಿದ್ದರೆ ಅಹಿಂದಕ್ಕೆ ಮರಳಲು ಸಿ.ಎಂ.ಇಬ್ರಾಹಿಂ ಜೊತೆ ಮಾಲ್ಡೀವ್ಸ್‌ನಲ್ಲಿ ಸಿದ್ದರಾಮಯ್ಯ ಸಭೆ ನಡೆಸಿರಲಿಲ್ಲವೇ ಎಂದು ಪ್ರಶ್ನಿಸಿದರು.












Click it and Unblock the Notifications