ಕೆಲಸದಾಕೆ ಹತ್ಯೆ, ಮುರ್ಡೇಶ್ವರದಲ್ಲಿ ನಿಷೇಧಾಜ್ಞೆ

ಯಮುನಾ ನಾಗಪ್ಪ ನಾಯ್ಕ ಶನಿವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಳು ಎನ್ನಲಾಗಿದೆ. ಈ ಘಟನೆಯಿಂದ ಮುರ್ಡೇಶ್ವರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ, 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಯಮುನಾ ಪ್ರತಿದಿನ ಮುಹಮ್ಮದ್ ಹಸೀಬ್ ದೊಣ್ಣ ಎಂಬವರ ಮನೆ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಶನಿವಾರ ಸಂಜೆ 3 ಗಂಟೆಯಾದರೂ ಮನೆಗೆ ವಾಪಸಾಗದಿರುವುದನ್ನು ಕಂಡ ಆಕೆಯ ಮನೆಯವರು ಎಲ್ಲೆಡೆ ಹುಡುಕಾಡಿದ್ದರು. ಶನಿವಾರ ರಾತ್ರಿಯಾದರೂ ಸುಳಿವು ದೊರೆಯದೇ ಇದ್ದಾಗ ಕಂಗಾಲಾಗಿದ್ದ ಅವರು ರವಿವಾರವೂ ಹುಡುಕಾಟ ಮುಂದುವರಿಸಿದ್ದರು.
ಈ ನಡುವೆ ಭಾನುವಾರ ಬೆಳಗ್ಗೆ ದೊಣ್ಣ ಅವರ ಮನೆಯ ತೋಟದ ಕೆಲಸಕ್ಕೆ ಬಂದಿದ್ದ ವ್ಯಕ್ತಿಯೋರ್ವ ಹಾರೆಯನ್ನು ತರಲು ಕಟ್ಟಿಗೆ ತುಂಬಿದ್ದ ರೂಮಿಗೆ ಹೋದಾಗ ಅಲ್ಲಿ ಯುವತಿಯ ಶವವನ್ನು ಕಂಡು ಸುದ್ದಿ ಹಬ್ಬಿತ್ತು. ಇದರಿಂದ ಕಂಗಾಲಾದ ದೊಣ್ಣ ಅವರ ಮನೆಯವರು ನೇರ ಪೊಲೀಸ್ ಠಾಣೆಗೆ ಹೋಗಿದ್ದರು. ದೊಣ್ಣ ಅವರ ಮನೆಯ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ.
ಮನೆಯಲ್ಲಿಯೇ ಕೊಲೆ?: ಸ್ಥಳ ಪರಿಶೀಲನೆಯಿಂದ ಹಾಗೂ ಕಾರವಾರದಿಂದ ಬಂದಿದ್ದ ಶ್ವಾನ ಯುವತಿಯ ಶವವಿದ್ದಲ್ಲಿಂದ ನೇರವಾಗಿ ದೊಣ್ಣ ಅವರ ಮನೆಗೆ ಹೋಗಿ ಮತ್ತೆ ವಾಪಾಸು ಬಂದಿದೆ. ಮನೆಯೊಳಗೆ ಆಕೆ ತೊಟ್ಟಿದ್ದ ನೈಟಿಯ ತುಂಡೊಂದು ದೊರಕಿದ್ದು ಇದು ದೊಣ್ಣ ಅವರ ಮನೆಯವರೇ ಮಾಡಿದ ಕೊಲೆ ಕೃತ್ಯ ಎನ್ನುವುದಕ್ಕೆ ಪೂರಕವಾಗಿದೆ ಎಂದು ಹೆಚ್ಚುವರಿ ಡಿ.ವೈ.ಎಸ್.ಪಿ. ವಿ.ಬಿ.ಗಾಂವಕರ್ ಅಭಿಪ್ರಾಯಪಟ್ಟಿದ್ದಾರೆ. ಮನೆಯೊಳಕ್ಕೆ ಯಾವುದೇ ಕುರುಹು ದೊರೆಯದಂತೆ ನೀರಿನಿಂದ ಸ್ವಚ್ಚಗೊಳಿಸಿರುವುದೂ ಕೂಡಾ ಗೋಚರವಾಗಿದೆ.
ಕೇಸು ದಾಖಲು : ಈ ಪ್ರಕರಣದ ಸಂಬಂಧ ಮುಹಮ್ಮದ್ ಸಾದಿಕ್ ದೊಣ್ಣ (48), ಆತನ ಪತ್ನಿ ಸಲ್ಮಾ, ಮುಹಮ್ಮದ್ ಹಸೀಬ್ ದೊಣ್ಣ, ಪರ್ವೀನ್ ಹಾಗೂ ಸಾಕು ಮಗ ಮುಹಮ್ಮದ್ ಯಾಸೀನ್ (20) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಇವರಿಗೆ ಸಹಕರಿಸಿದ್ದರೆನ್ನಲಾದ ಮುಹಮ್ಮದ್ ನಾಸಿರ್, ನೀಲಗಿರಿ, ಹಬೀಮ್ ಶೇಖ್, ಅಂಡಾ ನಾಸಿರ್ ಮುಂತಾದವರ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆದಿದೆ.
ಯುವತಿಯ ತಲೆಭಾಗದಲ್ಲಿ ಗಾಯವಾಗಿದ್ದು, ಮುಖದಲ್ಲಿ ಸಂಪೂರ್ಣ ರಕ್ತ ಸುರಿದಿರುವುದು ಕಂಡು ಬಂದಿದೆ. ಯುವತಿಯ ಕೊಲೆಯ ರಹಸ್ಯ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ. ಶವ ಪರೀಕ್ಷೆಗೆ ಮಣಿಪಾಲಕ್ಕೆ ಕಳುಹಿಸಲಾಗಿದ್ದು ಅಲ್ಲಿನ ವರದಿ ಬಂದ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ.
ಕೊಲೆ ನಡೆದಿರುವ ಕುರಿತು ಆಕ್ರೋಶಿತರಾದ ಜನರು ಅಲ್ಲಲ್ಲಿ ಕಲ್ಲು ತೂರಾಟ ನಡೆಸಿದ ಚಿಕ್ಕಪುಟ್ಟ ಘಟನೆ ಕೂಡಾ ನಡೆದಿದೆ. ಭಟ್ಕಳ ಪುರಸಭಾ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರು ಮುರ್ಡೇಶ್ವರಕ್ಕೆ ಬರುತ್ತಿದ್ದಾಗ ಅವರ ವಾಹನಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಮುಡೇìಶ್ವರ ಕೇರಿಯಲ್ಲಿ ಕೂಡಾ ಕಲ್ಲು ತೂರಾಟದ ಘಟನೆ ಕೂಡಾ ನಡೆದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಸಫಲರಾಗಿದ್ದಾರೆ.
ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS











Click it and Unblock the Notifications