ಸಿದ್ದು ನಿವಾಸದೆದುರು ಬಿಜೆಪಿ ದಂಡಿನ ಪ್ರತಿಭಟನೆ

ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಮತ್ತು ಸರಕಾರದ ವಿರುದ್ಧ ವಿನಾಕಾರಣ ದೂರುತ್ತಿದ್ದಾರೆ. ತಾಕತ್ತಿದ್ದರೆ ಅವರು ತಮ್ಮಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಬಿಜೆಪಿ ಮರು ಸವಾಲು ಹಾಕಿದೆ. ನಾವು ಪ್ರತಿಪಕ್ಷದ ಯಾವ ಶಾಸಕರನ್ನು ಸೆಳೆದಿಲ್ಲ. ಅವರೆ ಪಕ್ಷದ ತತ್ವ-ಸಿದ್ಧಾಂತಗಳನ್ನು ನಂಬಿ ಬಿಜೆಪಿಗೆ ಬರುತ್ತಿದ್ದಾರೆ ಎಂದು ಬಿಜೆಪಿ ಪ್ರತಿಭಟನಾಕಾರರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಹೋರಾಟ : ಅಪರೇಷನ್ ಕಮಲದ ಮೂಲಕ ಕಾಂಗ್ರೆಸ್ ನ ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಶಾಸಕ ರಾಮಚಂದ್ರರನ್ನು ಬಿಜೆಪಿ ಸೆಳೆದುಕೊಂಡ ಕ್ರಮವನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೇತತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ಮಂಗಳವಾರ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೇಸ್ ಕೋರ್ಸ್ ರಸ್ತೆ ನಿವಾಸದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಆಕ್ರೋಶ ಭರಿತರಾಗಿದ್ದ ಕಾಂಗ್ರೆಸ್ ಶಾಸಕರು ಸಿಎಂ ಮನೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಯಿತು. ನಂತರ ರಸ್ತೆಯಲ್ಲೇ ಕುಳಿತ ಸಿದ್ದು, ಡಿಕೆಶಿ ಮತ್ತಿತ್ತರು ಬಿಜೆಪಿ ವಿರುದ್ಧ ಹರಿಹಾಯ್ದರು. ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ, ಕುದುರೆ ವ್ಯಾಪಾರ ಮಾಡುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications