ಬಿಜೆಪಿಯನ್ನು ಮಾತ್ರ ದೂರುವುದು ಸರಿಯೇ?

ಒಟ್ಟಿನಲ್ಲಿ, ಧ್ವನಿಮತದಿಂದ ಬಹುಮತ ಸಾಬೀತುಪಡಿಸಿರುವ ಬಿಜೆಪಿಯ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದೆ. ಅವುಗಳ ಗುರಿಯಿರುವುದು ಒಂದೇ, ಬಿಜೆಪಿಯನ್ನು ಕರ್ನಾಟಕದಲ್ಲಿ ಮುಗಿಸಿಹಾಕಿಬಿಡಬೇಕು, ದಕ್ಷಿಣ ಭಾರತದಲ್ಲಿ ಬಿಜೆಪಿ ಆಳ್ವಿಕೆಗೆ ಕೊನೆಹಾಡಬೇಕು. ಒಂದೆಡೆ ವಿಪಕ್ಷಗಳು ಆಕಾಶ ಕಳಚಿಬೀಳುವಂತೆ ಹಾರಾಡುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ತಣ್ಣಗೆ ರೆಸಾರ್ಟ್ ಸೇರಿಕೊಂಡು ತಲೆಬಿಸಿ ಕಡಿಮೆ ಮಾಡಿಕೊಳ್ಳುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ವೆಂಕಯ್ಯ ನಾಯ್ಡು, ಅನಂತಕುಮಾರ್ ಮುಂತಾದವರೆಲ್ಲ ಸಿಹಿ ಹಂಚಿ ಬಹುಮತ ಸಾಬೀತುಪಡಿಸಿದ್ದನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಸಂತಸ ಎಷ್ಟು ದಿನ, ಎಷ್ಟು ಗಂಟೆ?
ಮುಂದೆ ಏನಾದರೂ ನಡೆಯಲಿ, ಇಂದು ಬೆಳಗಿನಿಂದ ನಡೆದ ಎಲ್ಲ ವಿದ್ಯಮಾನಗಳ 'ವಿಲನ್' ಆಗಿ ಬಿಜೆಪಿಯನ್ನು ಬಿಂಬಿಸಲಾಗುತ್ತಿದೆ. ಬಿಜೆಪಿ ತಪ್ಪೆಸಗಿಲ್ಲವೆಂದೇನೂ ಅಲ್ಲ. ಆಡಳಿತ ಸ್ಥಾಪಿಸುವ ಹಂತದಲ್ಲಿಂದ ತಪ್ಪುಗಳನ್ನು ಮಾಡುತ್ತಲೇ ಸಾಗಿದೆ. ಭ್ರಷ್ಟಾಚಾರ, ಭೂಕಬಳಿಕೆ, ರೈತರ ಮೇಲೆ ಗುಂಡು, ಚರ್ಚ್ ಮೇಲಿನ ದಾಳಿಯ ಆರೋಪ ಸೇರಿದಂತೆ ನಾನಾ ಹಗರಣಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದೆ. ಭಿನ್ನಮತೀಯರು ರೆಬೆಲ್ ಸ್ಟಾರ್ ಗಳಾಗಲು ಹೋದಂದಿನಿಂದ ನಡೆದ ಘಟನಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ಒಂದೇ ಅಲ್ಲ ಎಲ್ಲ ಪಕ್ಷಗಳೂ ಅಡ್ಡದಾರಿ ಹಿಡಿದು ಇತರ ಪಕ್ಷಗಳನ್ನು ದಾರಿತಪ್ಪಿಸುತ್ತ ಮತ್ತು ಮತದಾರರನ್ನು ಮೂರ್ಖರನ್ನಾಗಿ ಮಾಡುತ್ತಲೇ ಬಂದಿವೆ.
ಇಂದಿನ ಘಟನಾವಳಿಗಳನ್ನೇ ನೋಡೋಣ. ವಜಾಗೊಂಡ ಶಾಸಕರು ಪ್ರವೇಶ ಇಲ್ಲದಿದ್ದರೂ ಅಕ್ಷರಶಃ ಗೂಂಡಾಗಳಂತೆ ವರ್ತಿಸಿ ವಿಧಾನಸಭೆಗೆ ನುಗ್ಗಿದ್ದಾರೆ. ಐದಾರು ಕೋರ್ಟ್ ಮಾರ್ಷಲ್ ಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ದೊಂಬಿ ಎಬ್ಬಿಸಿದ್ದರಿಂದ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಬೇಕಾಯಿತು. ಪೊಲೀಸರ ಮಧ್ಯಪ್ರವೇಶವನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದರು.
ಈ ಘಟನೆಗೂ ಹಿಂದೆ ಹೋಗಿ ನೋಡಿದರೆ, ಭಿನ್ನಮತೀಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಜೆಡಿಎಸ್, ಕೆಲ ಬಿಜೆಪಿ ಶಾಸಕರನ್ನು ಕೂಡ ಅಕ್ಷರಶಃ ಹೈಜಾಕ್ ಮಾಡಿತು. ಇದಕ್ಕೆ ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ಸಹಾಯ ನೀಡಿದ್ದು ಗುಟ್ಟಾಗೇನೂ ಉಳಿದಿಲ್ಲ. ಆರಂಭದಿಂದಲೂ ಬಿಜೆಪಿಯ ಪಾಲಿನ ಮುಳ್ಳಾಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡ ಪೂರ್ವಾಗ್ರಹ ಪೀಡಿತರಾಗಿ ವರ್ತಿಸಿದ್ದಾರೆಯೆ ಎಂಬ ಸಂಶಯ ಕೂಡ ಮೂಡದೆ ಇರದು. ರಾಜ್ಯಪಾಲರು ಅನಗತ್ಯವಾಗಿ ವಿಧಾನಸಭೆ ಕಲಾಪಗಳಲ್ಲಿ ಮೂಗುತೂರಿಸಿ ಸಭಾಧ್ಯಕ್ಷರಿಗೆ ಆದೇಶಗಳನ್ನು ನೀಡುತ್ತಿದ್ದರು.
ಇಲ್ಲಿ ಎಲ್ಲ ಪಕ್ಷಗಳೂ ರಾಜ್ಯದ ಮತದಾರರು ಕ್ಷಮಿಸಲಾರದಂತೆ ತಪ್ಪೆಸಗಿದ್ದಾರೆ. ಮತ ಹಾಕಿದ ಮತಬಾಂಧವರಿಗೆ ಅವಮಾನ ಮಾಡಿದ್ದಾರೆ. ಅಭಿವೃದ್ಧಿಗಿಂತ ಕ್ಯಾಬಿನೆಟ್ ಸ್ಥಾನವೇ ದೊಡ್ಡದು, ದುಡ್ಡೇ ದೊಡ್ಡಪ್ಪ ಎಂಬಂತೆ ವರ್ತಿಸಿದ್ದಾರೆ. ಎಲ್ಲಾ ಪಕ್ಷಗಳೂ ಒಂದಕ್ಕೊಂದು ಕೆಸರೆರಚಾಟದಲ್ಲಿ ತೊಡಗಿ ಇಡೀ ರಾಜ್ಯಕ್ಕೆ ಕೆಸರು ಬಳಿದಿವೆ. ಪರಿಸ್ಥಿತಿ ಹೀಗಿರುವಾಗ, ಒಂದೇ ಪಕ್ಷದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ಓದುಗರೇ ತೀರ್ಮಾನಿಸಬೇಕು.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications