ರಾಜಕೀಯ ಮಹಾಭಾರತದಲ್ಲಿ ನಾಳೆ ಏನಾಗಲಿದೆ?

Karnataka crisis : What happens tomorrow?
ಬೆಂಗಳೂರು, ಅ. 9 : ರೆಬೆಲ್ ಸ್ಟಾರ್ ರೇಣುಕಾಚಾರ್ಯ ಏಕಾಂಗಿಯಾಗಿರುವುದು, ಭಿನ್ನಮತೀಯರು ಮತ್ತು ಇನ್ನೂ ಕೆಲ ಬಿಜೆಪಿ ಶಾಸಕರು ಜೆಡಿಎಸ್ ಜೊತೆ ಹೆಜ್ಜೆ ಹಾಕಿರುವುದು, ಸರಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ನಾಯಕತ್ವದ ಬಿಜೆಪಿ ಹರಸಾರಸ ಪಡುತ್ತಿರುವುದು ರಾಜ್ಯದಲ್ಲಿ ರಾಜಕೀಯ ಸ್ಥಿತಿಯನ್ನು ಅಯೋಮಯವನ್ನಾಗಿಸಿವೆ.

ಎರಡೂವರೆ ವರ್ಷಗಳ ಬಿಜೆಪಿ ಸರಕಾರ ಉಳಿಯುವುದೇ ಅಥವಾ ವಿರೋಧಪಕ್ಷಗಳ ಬಲದಿಂದ ಬೀಳಿಸಲಾಗುವುದೆ ಎಂಬುದು ಸೋಮವಾರ 11ರಂದು ವಿಧಾನಸಭೆಯಲ್ಲಿ ತೀರ್ಮಾನವಾಗಲಿದೆ. ಏನೇ ಅಡೆತಡೆಯಿದ್ದರೂ ಬಹುಮತ ಸಾಬೀತುಪಡಿಸುವುದಾಗಿ ಯಡಿಯೂರಪ್ಪ ವಿಶ್ವಾಸದಿಂದ ಹೇಳುತ್ತಿದ್ದರೆ, ವಿರೋಧಪಕ್ಷಗಳು ಶತಾಯಗತಾಯ ಬಿಜೆಪಿ ಸರಕಾರವನ್ನು ಕೆಡವಲು ಎಲ್ಲಾ ತಂತ್ರಗಳನ್ನು ಪ್ರಯೋಗಿಸುತ್ತಿವೆ.

ಸಂಖ್ಯಾ ಬಲ : 73 ಶಾಸಕರ ಬಲ ಹೊಂದಿರುವ ಕಾಂಗ್ರೆಸ್, 28 ಜನಪ್ರತಿನಿಧಿಗಳನ್ನು ಪಡೆದಿರುವ ಜೆಡಿಎಸ್ ಎರಡೂ ಮೈತ್ರಿ ಮಾಡಿಕೊಂಡು ಯಡಿಯೂರಪ್ಪನವರ ವಿರುದ್ಧ ಸಿಡಿದೆದ್ದಿರುವ 19 ಜನ ಭಿನ್ನಮತೀಯರೊಂದಿಗೆ ಕೈಜೋಡಿಸಿದರೆ ಬಿಜೆಪಿ ಸರಕಾರ ಉಳಿಯುವುದು ಕಷ್ಟ ಕಷ್ಟ. ಕೆಲ ದಿನಗಳ ಹಿಂದೆ ಬದ್ಧ ವೈರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹಸ್ತಲಾಘವ ಮಾಡಿದ್ದನ್ನು ನೋಡಿದರೆ ಯಾವುದೂ ಅಸಾಧ್ಯವಲ್ಲ. ಆದರೂ, ಸರಕಾರ ಉಳಿಸಿಕೊಳ್ಳುವ ಆಶಾಭಾವನೆ ಯಡಿಯೂರಪ್ಪ ಹೊಂದಿದ್ದಾರೆ.

ಬಿಜೆಪಿ ಶಾಸಕರಾದ ಕೃಷ್ಣಯ್ಯ ಶೆಟ್ಟಿ, ರಾಮಣ್ಣ ಲಮಾಣಿ ಮತ್ತು ನರಸಿಂಹಸ್ವಾಮಿ ಕೂಡ ಜೆಡಿಎಸ್ ಜೊತೆ ಕೈಜೋಡಿಸಲಿದ್ದಾರೆ ಎಂಬ ಗಾಳಿಸುದ್ದಿ ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲಮಯ ಮಾಡಿತ್ತು. ಆದರೆ, ಬಿಜೆಪಿ ಈ ಗಾಳಿಸುದ್ದಿಯನ್ನು ತಳ್ಳಿಹಾಕಿದ್ದು ಉಳಿದೆಲ್ಲ ಶಾಸಕರು ತಮ್ಮೊಂದಿಗಿದ್ದೇವೆ ಎಂದು ಸ್ಪಷ್ಟೀಕರಣ ಕೊಟ್ಟಿದೆ. ಈ ನಡುವೆ, ಪಕ್ಷಕ್ಕೆ ಕೈಕೊಟ್ಟಿದ್ದನ್ನು ವಿರೋಧಿಸಿ ಕೆಜಿಎಫ್ ಶಾಸಕ ವೈ ಸಂಪಂಗಿ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಕೆಲ ದಿನಗಳ ಹಿಂದೆ ರೇಣುಕಾಚಾರ್ಯ ಅವರ ನಡೆಗಳನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದರು.

ರೇಣುಕಾ ವಿಲನ್ : ಶಾಸಕರಲ್ಲಿ ಭಿನ್ನಮತದ ಬೀಜ ಬಿತ್ತಿ ನೀರೆರೆದು ಗೊಬ್ಬರ ಹಾಕಿ ಮರವನ್ನಾಗಿಸಿದ್ದ ರೇಣುಕಾಚಾರ್ಯ ಅವರು ಭಿನ್ನಮತೀಯರಲ್ಲೂ, ಬಿಜೆಪಿಯಲ್ಲೂ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ದಂಗೆಯೇಳುವಂತೆ ಶಾಸಕರನ್ನು ಬಡಿದೆಬ್ಬಿಸಿ ಕೊನೆಗೆ ಅವರೇ ಬೆನ್ನಿಗೆ ಚೂರಿ ಹಾಕಿದರು ಎಂದು ಭಿನ್ನಮತೀಯರು ಆರೋಪಿಸಿದ್ದರೆ, ಬೆಂಗಳೂರಿನ ಬಿಜೆಪಿ ಪಾಳಯದಲ್ಲಿ ಸರಕಾರವನ್ನು ಪತನದಂಚಿನಲ್ಲಿ ತಂದಿರುವ ರೇಣುಕಾಚಾರ್ಯ ವಿರುದ್ಧ ಅನೇಕ ಶಾಸಕರು ಬುಸುಗುಡುತ್ತಿದ್ದಾರೆ.

ಗೋವಾದಲ್ಲಿ ಜನಾರ್ದನ ರೆಡ್ಡಿ ಸಂಧಾನ ವಿಫಲವಾದನಂತರ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ನಡೆಸಿದ ಸಂಧಾನ ಕೂಡ ಯಾವುದೇ ಫಲ ನೀಡಿದಂತಿಲ್ಲ. ಮುಂದಡಿಯಿಟ್ಟ ಮೇಲೆ ಹಿಂದಿರುಗಿ ಪ್ರಯೋಜನವಿಲ್ಲವೆಂದು ಪಟ್ಟುಹಿಡಿದಿರುವ ಭಿನ್ನಮತೀಯರು ಸರಕಾರದ ವಿರುದ್ಧ ಮತಹಾಕುವುದು ಖಚಿತ ಎಂದು ಹೇಳಿದ್ದಾರೆ.

ಬಿಜೆಪಿ ಸರಕಾರವನ್ನು ಬೀಳಿಸುವುದೇ ತಮ್ಮ ಏಕೈಕ ಧ್ಯೇಯ ಎಂದು ಬಹಿರಂಗವಾಗಿ ಹೇಳುತ್ತಿರುವ ಜೆಡಿಎಸ್ ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ತೆರೆಮರೆಯಿಂದ ಇದನ್ನೆಲ್ಲ ವೀಕ್ಷಿಸುತ್ತಿರುವ ಕಾಂಗ್ರೆಸ್ ಮಾತ್ರ ಡಿಪ್ಲೋಮ್ಯಾಟಿಕ್ ಆಗಿ ರಣತಂತ್ರ ರೂಪಿಸುತ್ತಿದೆ. ವಿಶ್ವಾಸಮತದ ವಿರುದ್ಧ ಮತ ಹಾಕುವಂತೆ ತನ್ನ ಎಲ್ಲ ಶಾಸಕರಿಗೆ ವ್ಹಿಪ್ ನೀಡಿದೆ. ರಾಜಕೀಯ ರಂಗದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಎಲ್ಲ ವಿವರಗಳನ್ನು ರಾಷ್ಟ್ರಪತಿಗೆ ತಿಳಿಸುವುದಾಗಿ ಹೇಳಿದ್ದಾರೆ. ನನ್ನ ನಿರ್ಧಾರವೇ ಅಂತಿಮವಾಗಲಿದೆ ಎಂದು ಹೇಳಿ ಬಿಜೆಪಿ ನಾಯಕರಿಗೆ ಮತ್ತಷ್ಟು ತಲೆಬಿಸಿ ತಂದಿದ್ದಾರೆ.

ರಾಜಕೀಯವೆಂಬ ಬೃಹನ್ನಾಟಕದಲ್ಲಿ ನಾಳೆ ಏನಾಗುತ್ತದೆಂಬುದನ್ನು ಬಲ್ಲವರು ಯಾರು? ಇಂದು ಒಬ್ಬರ ಹೆಗಲ ಮೇಲಿದ್ದ ಕೈ ನಾಳೆ ಇನ್ನೊಬ್ಬರ ಹೆಗಲ ಮೇಲಿರುತ್ತದೆ ಎಂಬುದಕ್ಕೆ ಕೆಲ ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಇಂದು ಒಬ್ಬರಿಗೆ ನಿಷ್ಠೆ ನಾಳೆ ಇನ್ನೊಬ್ಬರಿಗೆ. ಕ್ಷಣಕ್ಷಣಕ್ಕೂ ರೋಚಕ ತಿರುವುಗಳು, ಮುರುವುಗಳು. ದೇವರ ಮೊರೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳುವರೆ ಎಂಬುದು ಸೋಮವಾರ ಬೆಳಿಗ್ಗೆ ತಿಳಿಯಲಿದೆ.


ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+