ಜೆಡಿಎಸ್ ಜನ್ಮ ಜಾಲಾಡಿದ ಯಡಿಯೂರಪ್ಪ

Yeddyurappa
ಬೆಂಗಳೂರು, ಅ. 6 : ರಾಜ್ಯ ರಾಜಕೀಯದಲ್ಲಿ ನಡೆದಿರುವ ಎಲ್ಲ ಅಕ್ರಮಗಳಿಗೆ ಕಾರಣರಾಗಿ ಹಿಂಬಾಗಿಲು ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತಿರುವ ದೇವೇಗೌಡ ಮತ್ತವರ ಕುಟುಂಬದ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು. ದೇವೇಗೌಡ ಮತ್ತು ಅವರ ಮಕ್ಕಳು ಕರ್ನಾಟಕಕ್ಕೆ ಶಾಪವಾಗಿದ್ದಾರೆ. ಈ ಅಪ್ಪ ಮಕ್ಕಳು ನೂರಾರು ಕೋಟಿ ರುಪಾಯಿಗಳನ್ನು ಗುಳಂ ಮಾಡಿದ್ದಾರೆ. ನೂರಾರು ಎಕರೆ ಅಕ್ರಮ ಜಮೀನು ಮಾಡಿಕೊಂಡಿದ್ದಾರೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದೊಳಗೆ ಎದ್ದಿರುವ ಭಿನ್ನಮತ ಶಮನಕ್ಕೆ ತುರ್ತು ಸಚಿವ ಸಂಪುಟ ನಡೆಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಅವರ ಜನ್ಮಜಾಲಾಡಿದರು. ತಮ್ಮ ಪ್ರೆಸ್ ಮೀಟ್ ಉದ್ದಕ್ಕೂ ಅಪ್ಪ-ಮಕ್ಕಳು ಎಂದು ಸಂಭೋದಿಸಿದ ಯಡಿಯೂರಪ್ಪ, ಕುಮಾರಸ್ವಾಮಿ ಅವರ ಅವ್ಯವಹಾರವನ್ನು ಇಂಚಿಂಚಾಗಿ ಬಿಚ್ಚಿಟ್ಟರು.

ದೇವೇಗೌಡ ಮತ್ತು ಅವರ ಕುಟುಂಬಕ್ಕೆ ಏನಾದರೂ ಮಾನ ಮಾರ್ಯಾದೆ ಇದೆಯೇನ್ರೀ. ಜನತೆ ಬೇಸತ್ತು ಇವರನ್ನು ಅಧಿಕಾರದಿಂದ ದೂರ ಇಟ್ಟಿದ್ದರೂ ಸರಕಾರ ಅಸ್ಥಿರಗೊಳಿಸುವ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಮಾನ ಇದ್ದವರು, ಗೌರವಸ್ಥರು ಮಾಡುವ ಕೆಲಸವೇನ್ರೀ ಇದು ಎಂದು ಕಿಡಿಕಾರಿದರು.

ಸರಕಾರದ ಸಾಧನೆಯನ್ನು ಸಹಿಸಲು ಸಾಧ್ಯವಾಗದೆ ಈ ಅಪ್ಪ-ಮಕ್ಕಳು ಸರಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅನೇಕ ಅವ್ಯವಹಾರಗಳನ್ನು ನಡೆಸಿದ್ದಾರೆ. ಇವರ ಆಡಳಿತಾವಧಿಯಲ್ಲೂ ಭೂಸ್ವಾಧೀನ ಕೈಬಿಟ್ಟ ಅನೇಕ ನಿದರ್ಶನಗಳು ಇವೆ ಎಂದು ಮುಖ್ಯಮಂತ್ರಿ ದಾಖಲೆ ಸಮೇತ ಎಲ್ಲವನ್ನೂ ಮಾಧ್ಯಮಗಳಿಗೆ ಬಿಚ್ಚಿಟ್ಟರು.

ನಾಳೆಯಿಂದ ಈ ಅಪ್ಪ ಮಕ್ಕಳು ನಾಡಿಗೆ ಎನೇನೆಲ್ಲಾ ಅವ್ಯವಹಾರ ಮಾಡಿದ್ದಾರೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸುತ್ತೇವೆ. ಮುಖ್ಯವಾಗಿ ನನ್ನ ಚೋಟಾ ಸಹಿ ವಿರುದ್ಧ ಆಕ್ಷೇಪ ಎತ್ತಿರುವ ಕುಮಾರಸ್ವಾಮಿ, ತಾವು ಮುಖ್ಯಮಂತ್ರಿಯಾಗಿದ್ದಾಗ ಚೋಟಾ ಸಹಿ ಮಾಡಿದ್ದಾರೆ ಎಂಬುದು ದಾಖಲೆ ಹೇಳುತ್ತದೆ. ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ಮಾಧ್ಯಮಕ್ಕೆ ನೀಡಿದ ಅವರು, ಇದಕ್ಕೆ ಏನಂತ ಹೇಳುತ್ತಾರೆ. ಈ ಸಹಿ ಅವರದಾ ? ಅವರಪ್ಪ, ಅವರಣ್ಣ, ಅವರ ತಮ್ಮ ? ಯಾರದು ಎಂದು ಕುಮಾರಸ್ವಾಮಿ ಹೇಳಲಿ ಎಂದು ಮರುಸವಾಲು ಹಾಕಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಬೇನಾಮಿ ಹೆಸರಿನಲ್ಲಿ ರಾಚೇನಹಳ್ಳಿ ಅವರ ಅಣ್ಣ ಬಾಲಕೃಷ್ಣೇಗೌಡ ಅವರ ಪತ್ನಿಗೆ ಸರ್ವೆ ನಂಬರ್ 81/1 ರಲ್ಲಿ ಅಕ್ರಮವಾಗಿ 5.22 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದಾರೆ. ಬೆಂಗಳೂರಿನ ಪದ್ಮನಾಭ ನಗರ, ಬೆಂಗಳೂರು ಪೂರ್ವ ತಾಲ್ಲೂಕು, ಯಲಹಂಕ ಹೋಬಳಿ ಮತ್ತು ಮೈಸೂರು ಸೇರಿದಂತೆ ಹಲವಾರು ಎಕರೆ ಪ್ರದೇಶವನ್ನು ದೇವೇಗೌಡ ಕುಟುಂಬ ಅಕ್ರಮದಲ್ಲಿ ಭಾಗಿಯಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 60 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಪಕ್ಷೇತರರು ವಜಾ : ಪಕ್ಷೇತರರಾದ ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಡಿ ಸುಧಾಕರ್ ಮತ್ತು ನರೇಂದ್ರಸ್ವಾಮಿ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಆದರೆ, ಬಿಜೆಪಿಯ ಕೆಲ ಸಚಿವರು ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ತೆಗೆದುಕೊಂಡಿರುವುದಾಗಿ ಘೋಷಿಸಿರುವುದಾಗಿ ಹೇಳಿದ್ದಾರೆ.

ಸುಪ್ರಿಂಕೋರ್ಟ್ ನ ಪ್ರಕಾರ ಇದು ಕಾನೂನು ಬಾಹಿರ, ಒಂದು ಪಕ್ಷದ ಶಾಸಕರಾಗಿದ್ದುಕೊಂಡು ರಾಜ್ಯಪಾಲರಿಗೆ ಬೆಂಬಲ ವಾಪಸ್ ಪಡೆಯುವಂತಿಲ್ಲ. ಹಾಗೇನಾದರೂ ಆದರೆ, ಅವರು ಮುಂದಿನ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವುದು ನೆನಪಿರಲಿ. ಈ ಕೂಡಲೇ ಬೆಂಬಲ ವಾಪಸ್ ಪತ್ರವನ್ನು ವಾಪಸ್ ಪಡೆಯದಿದ್ದರೆ ಇವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+