24 ಬಿಜೆಪಿ ಶಾಸಕರು ನಾಪತ್ತೆ : ಸರಕಾರ ಗೋವಿಂದ

ಇಂದು ಸುಮಾರು 24 ಶಾಸಕರ ಗುಂಪು ಬೆಂಗಳೂರಿನಿಂದ ನಾಪತ್ತೆಯಾಗಿರುವ ಸುದ್ದಿ ದಟ್ಸ್ ಕನ್ನಡಕ್ಕೆ ತಿಳಿದು ಬಂದಿತ್ತು. ಮದ್ಯಾಹ್ನದ ಹೊತ್ತಿಗೆ ಇದು ನಿಜವಾಗಿದ್ದು, ಅಬಕಾರಿ ಮಂತ್ರಿ ರೇಣುಕಾಚಾರ್ಯ ನೇತೃತ್ವದ 24 ಅತೃಪ್ತ ಶಾಸಕರ ತಂಡ ಚೆನ್ನೈ ಹೊಲವಲಯದಲ್ಲಿರುವ ರಿಸಾರ್ಟ್ ವೊಂದರಲ್ಲಿ ಬಿಡಾರ ಹೊಡಿದೆ. ಬಿಜೆಪಿ ಶಾಸಕ ಭಿನ್ನಮತಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದವರು ಮತ್ತು ಸಂಪುಟದಿಂದ ಕೈಬಿಟ್ಟವರು ಇದ್ದಾರೆ ಎನ್ನುವುದು ಸ್ಪಷ್ಟ.
ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ರೇಣುಕಾಚಾರ್ಯ ಅವರ ಗಳಸ್ಯ ಕಂಠಸ್ಯ ಸ್ನೇಹಿತ ಬೇಳೂರು ಗೋಪಾಲಕೃಷ್ಣ ಅವರನ್ನು ಮಂತ್ರಿ ಮಾಡಲು ರೇಣುಕಾಚಾರ್ಯ ಈ ಗ್ಯಾಂಗಿನ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. ಗೂಳಿಹಟ್ಟಿ ಶೇಖರ್ ನಿರಾಶ್ರಿತರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಈ 24 ಮಂದಿ ಶಾಸಕರು ಯಾರು ಎನ್ನುವುದು ಮಾತ್ರ ಇನ್ನೂ ಗೌಪ್ಯವಾಗಿದೆ.
ಪಕ್ಷದಲ್ಲಿ ಎದ್ದಿರುವ ಭಿನ್ನಮತ ಶಮನ ಮಾಡಲು ಗೃಹ ಸಚಿವ ಆರ್ ಆಶೋಕ್, ಆರೋಗ್ಯ ಮಂತ್ರಿ ಬಿ ಶ್ರೀರಾಮುಲು, ಜಲಸಂಪನ್ಮೂಲ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ದಾವಣಗೆರೆ ಸಂಸದ ಸಿದ್ಧೇಶ್ ಅವರ ತಂಡ ಅತೃಪ್ತರ ಮನವೂಲಿಸಲು ಚೆನ್ನೈ ಕಡೆಗೆ ಪ್ರಯಾಣ ಬೆಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಸರಕಾರದ ಮೇಲೆ ಹುಸಿ ಬಾಂಬ್ ಹಾಕಿರುವ ಶಾಸಕ ವರ್ತೂರು ಪ್ರಕಾಶ, ಸಂಜೆ ವೇಳೆಗೆ ಬಿಜೆಪಿ ಸರಕಾರ ಕುಮಾರಸ್ವಾಮಿ ಅವರಿಂದ ಪತನಗೊಳ್ಳಲಿದೆ ಎಂದು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.












Click it and Unblock the Notifications