ಅಯೋಧ್ಯೆ : ಸೌಹಾರ್ದ ಇತ್ಯರ್ಥಕ್ಕೆ ಯತ್ನ

ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರ್ಜಿದಾರರ ಪೈಕಿ ಒಬ್ಬರಾದ ಮೊಹಮದ್ ಹಶೀಮ್ ಅನ್ಸಾರಿ ಅವರು ಅಖಿಲ ಭಾರತೀಯ ಅಖಾಡಾ ಪರಿಷತ್ ಅಧ್ಯಕ್ಷ ಮಹಾಂತ ಜ್ಞಾನದಾಸ್ ಅವರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ವಿವಾದಾತ್ಮಕ ಸ್ಥಳದ ಸಮೀಪದ ಹನುಮಾನ್ ನಗರಿಯಲ್ಲಿನ ಹನುಮನ ದೇವಾಲಯದಲ್ಲಿ ಉಭಯ ನಾಯಕರು ಸುಮಾರು ಒಂದು ಗಂಟೆ ಕಾಲ ರಹಸ್ಯ ಮಾತುಕತೆ ನಡೆಸಿದರು.
ಸೌಹಾರ್ದಯುತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗಳು ನಡೆದವು ಎಂದು ಹೇಳಲಾಗಿದೆ. ಆದರೆ, ಮಾತುಕತೆಯ ವಿವರಗಳನ್ನು ನೀಡಲು ಮಹಾಂತ ನಿರಾಕರಿಸಿದ್ದಾರೆ. ಕೇಂದ್ರೀಯ ವಕ್ಫ್ ಮಂಡಳಿಯ ಸೂಚನೆ ಮೇರೆಗೆ ಮಹಾಂತ ಅವರನ್ನು ಭೇಟಿ ಮಾಡಲು ಬಂದಿರುವುದಾಗಿ ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.
ಮಾತುಕತೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅನ್ಸಾರಿ, ಈ ನಿಟ್ಟಿನಲ್ಲಿ ಅಖಿಲ ಭಾರತ ಅಖಾಡಾ ಪರಿಷತ್ ಮಧ್ಯವರ್ತಿಯಾಗಿ ಪ್ರಮುಖ ಪಾತ್ರ ವಹಿಸಲಿದೆ. ನಿರ್ಮೋಹಿ ಅಖಾಡಾ ಜೊತೆ ಜ್ಞಾನದಾಸ್ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದರು. ಆದರೆ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಸುಪ್ರೀಂಕೋರ್ಟ್ ನಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕ್ಫ್ ಮಂಡಳಿ ತಿಳಿಸಿದೆ.












Click it and Unblock the Notifications