ನೂರಾರು ಕೋಟಿ ರುಪಾಯಿ ಹಗರಣದಲ್ಲಿ ಸಿಎಂ : ಎಚ್ಡಿಕೆ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸರಕಾರದ ಹಗರಣವನ್ನು ಬಹಿರಂಗಗೊಳಿಸಿದರು. ಬೆಂಗಳೂರು ಪೂರ್ವ ತಾಲ್ಲೂಕು ಅರ್ಕಾವತಿ ಬಡಾವಣೆಗೆ ಸೇರಿದ ರಾಚೇನಹಳ್ಳಿ ಗ್ರಾಮದ ಏಳೂವರೆ ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು.
ಎರಡು ದಿನಗಳ ಹಿಂದಷ್ಟೇ ಬಡಾವಣೆಯ 6.5 ಎಕರೆ ಡಿನೋಟಿಫಿಕೇಷನ್ ಹಗರಣವನ್ನು ಕುಮಾರಸ್ವಾಮಿ ದಾಖಲೆ ಸಮೇತ ಬಹಿರಂಗಪಡಿಸಿದ್ದರು. ಇಂದು 2ನೇ ಹಗರಣ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಡಿನೋಟಿಫಿಕೇಷನ್ ಹಗರಣಗಳು ನಡೆದಿದ್ದು, 400 ರಿಂದ 500 ಎಕರೆ ಭೂಮಿಯನ್ನು ಮಧ್ಯವರ್ತಿಗಳಿಗಾಗಿ ಬಿಟ್ಟು ಕೊಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಏಳೂವರೆ ಎಕರೆ ಡಿನೋಟಿಫಿಕೇಷನ್ ಮಾಡಲು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಹೆಸರಿನ ಬದಲಿಗೆ ಬಿವಿಎಸ್ ಎಂಬ ಹೆಸರಿನಲ್ಲಿ ಸಹಿ ಮಾಡಿದ್ದಾರೆ. ರಾಜ್ಯದಲ್ಲಿ ಇನ್ನೊಬ್ಬ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆಯೇ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
2009 ನವೆಂಬರ್ 2 ರಂದು ಮುಖ್ಯಮಂತ್ರಿಗೆ ರಾಚೇನಹಳ್ಳಿ ಗ್ರಾಮಸ್ಥರು ಭೂಸ್ವಾಧೀನದಿಂದ 6.5 ಎಕರೆಯನ್ನು ಕೈಬಿಡುವಂತೆ ಮನವಿ ಸಲ್ಲಿಸಿದ್ದಾರೆ. ಹೆಸರು, ವಿಳಾಸ ಇಲ್ಲದ ಬಿಳಿ ಹಾಳೆಯ ಮನವಿಗೆ ಸ್ಪಂದಿಸಿರುವ ಯಡಿಯೂರಪ್ಪ ಕೈ ಬರಹದಲ್ಲಿ ಭೂಸ್ವಾಧೀನದಿಂದ 7.5ಎಕರೆಯನ್ನು ಕೈಬಿಡುವಂತೆ ಆದೇಶ ನೀಡಿದ್ದಾರೆ. ಅವರ ಜಂಟಿ ಕಾರ್ಯದರ್ಶಿ ನಂದಕುಮಾರ್ ಬಿಡಿಎಗೆ ನವೆಂಬರ್ ಗೆ 13 ರಂದು ಪತ್ರ ಬರೆದು ಎಲ್ಲಾ ಕಡತಗಳನ್ನು ಮಂಡಿಸುವಂತೆ ಸೂಚಿಸಿದ್ದಾರೆ.
ಯಾವ ಉದ್ದೇಶಕ್ಕಾಗಿ, ಯಾರಿಗಾಗಿ ಭೂಸ್ವಾಧೀನ ಕೈಬಿಡಲಾಯಿತು ಎಂಬುದು ಮಾಹಿತಿ ಇಲ್ಲ. ರೈತರಿಗೆ,ಬಡವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ ಎಂದು ಯಡಿಯೂರಪ್ಪ ಹೇಳಿಕೊಳ್ಳುತ್ತಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟದ್ದರೆ ಚಿಂತೆ ಇರಲಿಲ್ಲ. ಆದರೆ, ಮಧ್ಯವರ್ತಿ ಜಿಪಿಎ ಹೋಲ್ಡರ್ ಗಳ ಲಾಭಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications