ಕೊಡಗಿನಲ್ಲಿ ಇಂಜೆಕ್ಷನ್ ರಿಯಾಕ್ಷನ್ ಮೂರು ಬಲಿ

ಸುಂಟಿಕೊಪ್ಪ ಪಂಪ್‌ಹೌಸ್ ನಿವಾಸಿ ಮೊಯ್ದು, ಕೆದಕಲ್ ನಿವಾಸಿ ಸುಶೀಲ, ಕೊಡಗರಹಳ್ಳಿ ಸ್ಕೂಲ್‌ಬಾಣೆ ನಿವಾಸಿ ನಬೀಸಾ, ಕಾನ್‌ಬೈಲ್‌ನ ಹರೀಶ, ಸುಂಟಿಕೊಪ್ಪದ ಉಮರ್, ಆಸಿಯಮ್ಮ, ಸಂದೀಪ್ ಅವರುಗಳು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ಶನಿವಾರ ತೆರಳಿದ್ದು, ಈ ಸಂದರ್ಭ ಪರೀಕ್ಷಿಸಿದ ಮಹಿಳಾ ವೈದ್ಯಾಧಿಕಾರಿಗಳಿಬ್ಬರು ಎನಾಫೈಲಾಸಿಸ್ ಎಂಬ ಇಂಜೆಕ್ಷನ್ ನೀಡಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಇಂಜೆಕ್ಷನ್ ಪಡೆದ ರೋಗಿಗಳು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಅವರನ್ನು ತಕ್ಷಣ ಮಡಿಕೇರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೊಯ್ದು ಹಾಗೂ ಸುಶೀಲ ಎಂಬುವರು ಸಾವನ್ನಪ್ಪಿದರೆ, ಉಳಿದ ಐವರ ಸ್ಥಿತಿ ಗಂಭೀರಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಗೊಂದಲ, ಗಲಾಟೆ, ಭಯದ ವಾತಾವರಣ:ವಿಷಯ ತಿಳಿಯುತ್ತಿದ್ದಂತೆಯೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸುಂಟಿಕೊಪ್ಪ ಆಸ್ಪತ್ರೆಯ ಮುಂಭಾಗ ಜಮಾಯಿಸಿದ ಸಾರ್ವಜನಿಕರು ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಪಟ್ಟು ಹಿಡಿದರು. ಅಷ್ಟರಲ್ಲಿಯೇ ಸಂಬಂಧಿಸಿದ ವೈದ್ಯಾಧಿಕಾರಿಗಳು ಜಾಗ ಖಾಲಿ ಮಾಡಿದ್ದರು. ಈ ಸಂಬಂಧ ಪಟ್ಟಣದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಮಡಿಕೇರಿಯಲ್ಲೂ ಜನ ಜಮಾಯಿಸಿದ್ದು, ಅಧಿಕಾರಿಗಳು ಹಾಗೂ ರಾಜಕೀಯ ಪ್ರಮುಖರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆಗಳನ್ನು ಜಿಲ್ಲಾಧಿಕಾರಿಗಳು ನೀಡಿದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಇದೇ ಸಂದರ್ಭ ಮೃತಪಟ್ಟ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರ ವಿತರಿಸಲಾಯಿತು.
ಮತ್ತೊಂದು ಪ್ರಕರಣದಲ್ಲಿ ಕುಶಾಲನಗರದ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಪಕ್ಕದ ಮೆಡಿಕಲ್ ಶಾಪ್‌ನಿಂದ ತರಿಸಿ ನೀಡಿದ ಇಂಜೆಕ್ಷನ್ ರಿಯಾಕ್ಷನ್‌ಗೊಂಡಿದ್ದರಿಂದ ಕುಶಾಲನಗರ ನೆಹರು ಬಡಾವಣೆಯ ವಾಸು ಎಂಬುವರ ಪುತ್ರಿ ಸರಿತಾ ಎಂಬಾಕೆ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಪ್ರತಿಭಟನೆ ನಡೆಸಿದ್ದರಿಂದ ಕುಶಾಲನಗರದಲ್ಲಿ ಕೂಡ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಒಂದೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದರಿಂದ ಇದೀಗ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ರೋಗಿಗಳು ಆಸ್ಪತ್ರೆಗೆ ತೆರಳಲು ಹಿಂಜರಿಯುವಂತಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಈ ಘಟನೆ ನಡೆಯಲು ಪ್ರಮುಖ ಕಾರಣಗಳೇನು? ವೈದ್ಯರ ನಿರ್ಲಕ್ಷ್ಯವೇ ಅಥವಾ ಔಷಧಿ ಸರಬರಾಜು ಮಾಡಿದ ಕಂಪನಿಯದ್ದೋ ಎಂಬುವುದನ್ನು ಕಂಡು ಹಿಡಿದು ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಮುಂದೆ ಇಂತಹ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.











Click it and Unblock the Notifications