ನನ್ನ ಮಠಕ್ಕೆ ದಲಿತ ಉತ್ತರಾಧಿಕಾರಿ ಇಲ್ಲ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಮತಾಂತರಗೊಂಡ ದಲಿತ ಕ್ರೈಸ್ತನನ್ನು ಪೋಪ್ ಆಗಿ ಮಾಡಿದ್ದಾರೆಯೇ? ದಲಿತ ಬೋವಿ ಧರ್ಮೀಯನನ್ನು ಲಾಮಾ ಆಗಿ ನೇಮಿಸಿದ್ದಾರೆಯೇ ಎಂದು ನೀವು ಪತ್ರಕರ್ತರು ಕೇಳಿ ನೋಡೋಣ. ಅಲ್ಪಸಂಖ್ಯಾತರ ಬಗ್ಗೆ ನಮಗೆ ಗೌರವವಿದೆ. ಆದರೆ ನಮ್ಮ ಸರಕಾರಗಳು ಬಹುಸಂಖ್ಯಾತ ಹಿಂದೂಗಳಿಗಿಂತ ಹೆಚ್ಚಿನ ಸೌಲಭ್ಯ ಅವರಿಗೆ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿಕೆ ನೀಡಿದ್ದಾರೆ.
ಗೋಹತ್ಯೆ, ಮತಾಂತರ ಮುಂತಾದ ಪತ್ರಕರ್ತರ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿದ ಶ್ರೀಗಳು, " ಹಿಂದುತ್ವ ಎಂಬುದು ಧರ್ಮವೇ ಅಲ್ಲ" ಎಂದಾಗ ತೀವ್ರ ಭಾವೋದ್ವೇಗಕ್ಕೆ ಒಳಗಾದರು. ನಾನು ದಲಿತರಿಗೆ ದೀಕ್ಷೆ ನೀಡುತ್ತೇನೆಂದರೆ ಮತಾಂತರ ಮಾಡುತ್ತಿದ್ದಾರೆನ್ನುತ್ತಾರೆ. ಅದೇ ದಲಿತರು ಕ್ರೈಸ್ತರಾಗಿ ಮತಾಂತರಗೊಂಡರೆ ಅದನ್ನು ಹಕ್ಕು ಎಂದು ಪ್ರತಿಪಾದಿಸುತ್ತಾರೆ. ದಲಿತ ಸಂಸ್ಕೃತಿ ನಾಶವಾಗುವುದಿಲ್ಲವೇ? ಪ್ರಗತಿಪರರು ಮತ್ತು ಪ್ರತಿಗಾಮಿಗಳು ಇಬ್ಬರೂ ನನ್ನನ್ನು ವಿರೋಧಿಸುತ್ತಾರೆ ಆ ಬಗ್ಗೆ ನನಗೆ ಬೇಸರವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ವೈಯಕ್ತಿಕವಾಗಿ ನಾನು ಬ್ರಾಹ್ಮಣರು ಸೇರಿದಂತೆ ಯಾರ ಜೊತೆಯೂ ಸಹಪಂಕ್ತಿ ಭೋಜನ ಮಾಡುವುದಿಲ್ಲ. ಆದರೆ ಉಡುಪಿ ಅಷ್ಠಮಠಗಳಲ್ಲಿ ಸಹಪಂಕ್ತಿ ಭೋಜನವಿದೆ. ಜಾತಿ ವಿನಾಶದ ಬದಲು ಅಸ್ಪ್ರಶ್ಯತೆ ನಿವಾರಣೆಗಾಗಿ, ಉಚ್ಚ -ನೀಚ ಭಾವನೆಯನ್ನು ಅಳಿಸಿಹಾಕುವ ಮೂಲಕ ಹಿಂದೂ ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.












Click it and Unblock the Notifications