ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಿ ನರಸಿಂಹ ಸನ್ನಿಧಿಗೆ ಸತ್ಯಾತ್ಮತೀರ್ಥರಿಂದ ಪೂಜೆ

By * ಚಂದ್ರಶೇಖರ್, ಸವಣೂರು
|
Google Oneindia Kannada News

Satyatma Thirtha Swamiji
ಸವಣೂರ, ಸೆ. 7 : ರುದ್ರದೇವರ ಸಾಕ್ಷಾತ್ಕಾರ ಮಾಡಿಕೊಂಡಿದ್ದ ಶ್ರೀ ಸತ್ಯಧರ್ಮತೀರ್ಥರದ್ದು, ವಿಶ್ವತೋಮುಖವಾದ ವ್ಯಕ್ತಿತ್ವ. ಇವತ್ತಿಗೂ ಸತ್ಯಬೋಧರ ಸನ್ನಿಧಾನದಲ್ಲಿ ಇರುವ ಸತ್ಯಧರ್ಮತೀರ್ಥರ ಆರಾಧನೆಯನ್ನು ಇಲ್ಲಿ ಮಾಡುತ್ತಿರುವದು ಅತ್ಯಂತ ವಿಶೇಷ ಎಂದು ಶ್ರೀ ಸತ್ಯಾತ್ಮತೀರ್ಥರು ತಿಳಿಸಿದರು.

ಸವಣೂರಿನ ಶ್ರೀಮಠದಲ್ಲಿ ಶ್ರೀ ಸತ್ಯಧರ್ಮತೀರ್ಥರ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುಸ್ಮರಣೆ ಕೈಗೊಂಡ ಶ್ರೀಗಳು, ಸತ್ಯಬೋಧತೀರ್ಥರಲ್ಲಿ ವಿಶೇಷವಾದ ಅಧ್ಯಯನವನ್ನು ಮಾಡಿ ಪಾಂಡಿತ್ಯ ಪಡೆದುಕೊಂಡಿದ್ದ ಸತ್ಯಧರ್ಮ ತೀರ್ಥರದ್ದು ದೊಡ್ಡ ಅದರ್ಶದ ಜೀವನ. ಇವರ ಸ್ಮರಣೆಯನ್ನು ಮಾಡುವದೂ ದೊಡ್ಡ ಭಾಗ್ಯ ಎಂದರು.

ಹೊಳೆನರಸಿಪುರದಲ್ಲಿ ಅನೇಕ ದಿನಗಳ ಕಾಲ ಇದ್ದು, ಯಾವದೇ ಲೌಕಿಕವಾದ ಅಪೇಕ್ಷೆ ಇಲ್ಲದೆ ನಿತ್ಯದಲ್ಲಿ ವಸಿಷ್ಠ ಕರಾರ್ಚಿತ ನರಸಿಂಹ ದೇವರಿಗೆ ನಿತ್ಯವೂ ಗಂಧ ಸಮರ್ಪಣೆ ಮಾಡುತ್ತ, ವಿಶೇಷ ಅನುಗ್ರಹ ಪಡೆದುಕೊಂಡವರು. ರುದ್ರಾಂತರ್ಯಾಮಿಯಾದ ನರಸಿಂಹ ದೇವರ ವಿಶೇಷ ಉಪಾಸನೆ ಮಾಡುತ್ತ, ಭಗವಂತನ ಕೃಪಾಗಂಧವನ್ನು ಅಪೇಕ್ಷೆ ಮಾಡಿದವರು. ಅವರ ವೃಂದಾವನದ ಎದುರಿನಲ್ಲಿ ಗಂಗಾಜಲ ಹಾಗೂ ರುದ್ರದೇವರ ಸಾಕ್ಷಾತ್ಕಾರವಾಗಿದೆ ಎಂದು ತಿಳಿಸಿದರು.

ಪಾಠ-ಪ್ರವಚನ, ಗ್ರಂಥ ಲೇಖನದೊಂದಿಗೆ ಶ್ರೀ ಸತ್ಯಧರ್ಮತೀರ್ಥರು ಹಲವಾರು ವಿಶೇಷವಾದ ಸೇವೆಗಳನ್ನೂ ಸಲ್ಲಿಸಿದ್ದಾರೆ. ನಾನಾವಿಧವಾದ ಆಭರಣಗಳನ್ನು, ಸುವರ್ಣ-ರಜತ ಕವಚಗಳನ್ನು, ವಜ್ರದ ಪದಕಗಳನ್ನು ದೇವರಿಗೆ ಸಮರ್ಪಣೆ ಮಾಡಿದ್ದಾರೆ. ನರಸಿಂಹಪುರದ ದೇವಸ್ಥಾನದ ಗೋಪುರ ನಿರ್ಮಾಣ ಕೈಗೊಂಡು, ನರಸಿಂಹ ತೀರ್ಥವನ್ನು ಜೀರ್ಣೋದ್ದಾರ ಮಾಡಿ, ಅತಿ ಶ್ರೇಷ್ಠವಾದ ಕಟ್ಟಿಗೆಯ ರಥವನ್ನು ನರಸಿಂಹ ದೇವರಿಗೆ ಸಮರ್ಪಣೆ ಮಾಡಿದ್ದಾರೆ ಎಂದು ಶ್ರೀಗಳು ವಿವರಿಸಿದರು.

ಅಮೃತೋಪದೇಶ : ಶ್ರಾವಣ ಮಾಸದ ಸೋಮವಾರ ದಿವಸ ಗಂಧಕ್ಕೆ ಅಭಿಮಾನಿ ದೇವತೆಯಾದ ಪಾರ್ವತಿ ಹಾಗೂ ರುದ್ರದೇವರಲ್ಲಿ ಅಂತರ್ಯಾಮಿಯಾದ ನರಸಿಂಹ ದೇವರ ವಿಶೇಷ ಸ್ಮರಣೆ ಮಾಡಬೇಕು. ನರಸಿಂಹ ದೇವರ ಅನುಗ್ರಹ ಇದ್ದರೆ ಆಧ್ಯಾತ್ಮಸಾಧನೆಯ ಮಾರ್ಗ, ಮೋಕ್ಷದ ಮಾರ್ಗ ಸುಗಮವಾಗಿ ಸಾಗಲು ಸಾಧ್ಯ. ಜಗತ್ತಿಗೆ ಗಂಧವನ್ನು ನೀಡುವ ಮಹಾಲಕ್ಷ್ಮಿ ಗಂಧದ್ವಾರಳು. ಅವಳು ಇದ್ದ ಪರಿಸರದಲ್ಲಿ ಎಂದಿಗೂ ಚಿನ್ಮಯವಾದ ಸುಗಂಧ ಇರುತ್ತದೆ.

ಆ ಸುಗಂಧ ಬಂದಿದ್ದು ಭಗವಂತನಿಂದ. ಲೋಕ ವಿಲಕ್ಷಣವಾದ ಅಪ್ರಾಕೃತವಾದ ಗಂಧ ಭಗವಂತನಿಗೆ ಇದೆ. ಸುರಭಿ ಗಂಧವನ್ನು ಸೃಷ್ಠಿ ಮಾಡಿದ ಭಗವಂತನನ್ನು, ಸುರಭಿಗಂಧದಿಂದಲೇ ಉಪಾಸನೆ ಮಾಡಬೇಕು. ಭಗವಂತನ ವಿಶೇಷ ಸನ್ನಿಧಾನ ಇರುವುದಕ್ಕೂ ಗಂಧ ಎನ್ನುತ್ತಾರೆ. ನಾವು ಅಲ್ಪವಾದದನ್ನು ಸಮರ್ಪಣೆ ಮಾಡಿದರೂ ಭಗವಂತ ಅತಿ ಪ್ರೀತಿಯಿಂದ ಸ್ವೀಕಾರ ಮಾಡುತ್ತಾನೆ ಎಂದು ತಿಳಿಸಿದರು.

ಪರಮಾತ್ಮನ ಅಂತರ್ಯಾಮಿ ರೂಪಕ್ಕೆ ಗಂಧ ಎಂಬ ಹೆಸರಿದೆ. ಪ್ರತಿಮೆಯಲ್ಲಿನ ಭಗವಂತನಿಗೆ, ಆತನ ವಿವಿಧ ರೂಪಗಳಿಗೆ ನಾವು ಗಂಧ ಪುಷ್ಪಗಳನ್ನು ಸಮರ್ಪಣೆ ಮಾಡುತ್ತೇವೆ. ಆಗ, ಅಂತರ್ಯಾಮಿ ರೂಪದಿಂದ ಭಗವಂತ ಅಭಿನ್ನನಾಗಿದ್ದಾನೆ. ನನ್ನ ಬಿಂಬ ರೂಪದಿಂದ ಅಭಿನ್ನರೂಪನಾದ ಭಗವಂತನನ್ನೆ ಪೂಜೆ ಮಾಡುತ್ತೇನೆ ಎಂಬ ಅನುಸಂಧಾನ ನಮಗೆ ಇರಬೇಕು.

ದೇವರಲ್ಲಿ ಬೇಧ ಇಲ್ಲ. ಪ್ರತಿಮೆಯಲ್ಲಿಯೂ, ನನ್ನ ಬಿಂಬ ರೂಪಿಯೂ, ಗಂಧದಲ್ಲಿ ಇರುವ ದೇವರೂ ಒಬ್ಬನೇ. ಆದರೆ ನಮ್ಮ ಮೇಲೆ ವಿಶೇಷ ಅನುಗ್ರಹ ಮಾಡಿ, ತನ್ನ ಒಂದು ಬಿಂಬ ರೂಪವನ್ನು ನನಗಾಗಿ ಮೀಸಲಿಟ್ಟಿದ್ದಾನೆ. ನಮ್ಮ ಅಸ್ತಿತ್ವ, ಪ್ರವೃತ್ತಿಗಳನ್ನು ನಿಯಂತ್ರಣ ಮಾಡುವ ಈ ಬಿಂಬರೂಪ, ಅನಾದಿ ಕಾಲದಿಂದ ಅನಂತ ಕಾಲದವರೆಗೆ ಮೋಕ್ಷದಲ್ಲಿಯೂ ಜೀವವನ್ನು ನಿಯಂತ್ರಣ ಮಾಡುತ್ತದೆ ಎಂಬ ತಿಳಿವಳಿಕೆ ಹೊಂದಬೇಕು ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X