'ಕೈ' ಬೆಚ್ಚಗೆ ಮಾಡಿದರೆ ಅಕ್ರಮ ಗಣಿಗೆ ಜೈ

ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಅಕ್ರಮ ಗಣಿಗಾರಿಕೆಲ್ಲಿ ತೊಡಗಿರುವವರನ್ನು ಬೆತ್ತಲೆಗೊಳಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದಿದ್ದಾರೆ. ಕೇಂದ್ರ ಸರಕಾರ ಕೈ ಬೆಚ್ಚಗೆ ಮಾಡುವವರಿಗೆ ಮಾತ್ರ ಅನುಮತಿ ನೀಡುತ್ತಿದೆ. ಆದರೆ, ಸರಕಾರಿ ಸ್ವಾಮ್ಯದ ಕುದುರೆಮುಖ, ವಿಎಸ್ ಐಎಲ್ ಮತ್ತು ಜಿಂದಾಲ್ ನಂತಹ ಸಂಸ್ಥೆಗಳಿಗೆ ಏಕೆ ಅನುಮತಿ ನೀಡುತ್ತಿಲ್ಲ. ಇವರು ಕೇಂದ್ರ ಸರಕಾರವನ್ನು ಕೈಯನ್ನು ಬೆಚ್ಚಗೆ ಮಾಡುವಂತ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಇವರಿಗೆ ಗುತ್ತಿಗೆ ದೊರೆಯುತ್ತಿಲ್ಲ ಎಂದು ಯಡಿಯೂರಪ್ಪ ಆರೋಪಿಸಿದರು.
ಕೆಲವು ಸ್ವದೇಶಿ ಕಂಪನಿಗಳ ಮೌಲ್ಯವರ್ಧಿತ ಅದಿರು ರಫ್ತುಗೆ ಮುಂದೆ ಬಂದಿದ್ದರೂ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಾರವಾರ ಸಮೀಪದ ಬೇಲೇಕೇರಿ ಬಂದರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಲಕ್ಷಾಂತರ ಟನ್ ಕಬ್ಬಿಣದ ಅದಿರನ್ನು ಲೋಕಾಯುಕ್ತರು ಪತ್ತೆ ಹಚ್ಚಿದ್ದಾರೆ. ಇದುವರೆಗೂ ಒಟ್ಟು 58 ಜನರನ್ನು ಬಂಧಿಸಲಾಗಿದೆ. ಮುಂದೆ ಇನ್ನಷ್ಟು ಜನ ಬಂಧಿತರಾದರೆ ಇವರಿಗಾಗಿಯೇ ಪ್ರತ್ಯೇಕ ಜೈಲು ತೆರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೇಲೇಕೇರಿ ಬಂದರಿನ ಕರ್ಮಕಾಂಡ ಹೊರಬೀಳುತ್ತಿದ್ದಂತೆಯೇ ಮಾಜಿ ಸಚಿವರು, ಕೇಂದ್ರದ ಮಾಜಿ ಸಚಿವರು, ಪ್ರಭಾವಿ ರಾಜಕಾರಣಿಗಳು ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ನನ್ನ ಕೈಕಟ್ಟಿಹಾಕಲು ಯತ್ನಿಸುತ್ತಿದ್ದಾರೆ. ತಮ್ಮನ್ನು ಪರೋಕ್ಷವಾಗಿ ಹಾಗೂ ನೇರವಾಗಿ ಕೆಲವರು ಸಂಪರ್ಕಿಸುತ್ತಿದ್ದಾರೆಂದು ಅವರು ದೂರಿದರು. ಲೋಕಾಯುಕ್ತರು ತಮ್ಮ ಸತತ ಪರಿಶ್ರಮದಿಂದ ಸರಕಾರದ ಕಣ್ಣು ತೆರೆಸಿದ್ದಾರೆ. ಪ್ರತಿಪಕ್ಷಗಳು ಕೇವಲ ರೆಡ್ಡಿ ಸಹೋದರರನ್ನು ಮಾತ್ರ ಟೀಕಿಸುತ್ತದೆ. ನಾಡಿನ ಸಂಪತ್ತು ರಕ್ಷಿಸುವ ಇಚ್ಚೆ ಇದ್ದರೆ ಕೇಂದ್ರ ಸರಕಾರ ಕಬ್ಬಿಣದ ಅದಿರು ರಫ್ತು ನಿಷೇಧ ಮಾಡುವಂತೆ ಯಡಿಯೂರಪ್ಪ ಒತ್ತಾಯಿಸಿದರು.












Click it and Unblock the Notifications