ಬಿಜೆಪಿ ಶಾಸಕ ನರಸಿಂಹಸ್ವಾಮಿ ರಾಜೀನಾಮೆ?

ಬಳ್ಳಾರಿ ಸಮಾವೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸಂಜೆ ಹಿಂತಿರುಗಿದ ನಂತರ ಅವರಿಗೆ ರಾಜೀನಾಮೆ ಪತ್ರಸಲ್ಲಿಸಲಾಗುವುದು ಎಂದು ಶಾಸಕ ಜೆ ನರಸಿಂಹ ಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಗುರುವಾರ ದೊಡ್ಡಬಳ್ಳಾಪುರದ ಪುರಸಭೆಯಲ್ಲಿ ಈ ಬಗ್ಗೆ ಹೇಳಿದ್ದಲ್ಲದೆ, ಕೌಟುಂಬಿಕ ಕಲಹ ಹಾಗೂ ವೈಯಕ್ತಿಕ ಕಾರಣಗಳಿಂದ ತಾವು ರಾಜೀನಾಮೆ ನೀಡುತ್ತಿರುವುದಾಗಿ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.
ಇದೆಲ್ಲಾ ಜಾಲಪ್ಪನ ಜಾಲ?: 1972 ರಿಂದ ನಾವು ಬೇರೆಯಾಗಿ ವಾಸಿಸುತ್ತಿದ್ದೇವೆ. ರಾಜಕೀಯವಾಗಿ ಭಿನ್ನನಿಲುವು ಇದೆ. ಆದರೆ, ಯಾವುದೇ ಕಿರುಕುಳ ನೀಡುವುದಾಗಲಿ, ಬಿಜೆಪಿ ತೊರೆಯುವಂತೆ ಒತ್ತಾಯ ಮಾಡುವುದಾಗಿ ಮಾಡಿಲ್ಲ. ನನಗೂ ರಾಜೀನಾಮೆಗೂ ಸಂಬಂಧವಿಲ್ಲ. ನಾನು ಏನು ಬುದ್ಧಿ ಹೇಳೋಕೆ ಆಗುತ್ತೆ. ನನಗೇನು ಅಧಿಕಾರವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ನರಸಿಂಹಸ್ವಾಮಿ ಅವರ ತಂದೆ ಆರ್ ಎಲ್ ಜಾಲಪ್ಪ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.
ಸ್ವಾಭಿಮಾನಿ ಸಮಾವೇಶ ಸಂಭ್ರಮಾಚರಣೆಯಲ್ಲಿರುವ ಬಿಜೆಪಿ ಸರ್ಕಾರಕ್ಕೆ ನರಸಿಂಹಸ್ವಾಮಿ ಅವರ ರಾಜೀನಾಮೆಯಿಂದ ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆಯಾಗಲಿದೆ. ಆಡಿಕೊಂಡು ನಗುವ ವಿರೋಧ ಪಕ್ಷಗಳ ಮುಂದೆ ಎಡವಿ ಬಿದ್ದಂತಾಗುತ್ತದೆ.
ಆದರೆ, ನರಸಿಂಹಸ್ವಾಮಿ ಅವರಿಂದ ತೆರವಾದ ದೊಡ್ಡಬಳ್ಳಾಪುರ ಕ್ಷೇತ್ರ ಸ್ಥಾನವನ್ನು ಮತ್ತೆ ಪಡೆಯುವುದು ಬಿಜೆಪಿಗೆ ಸುಲಭದ ಮಾತಲ್ಲ. ನರಸಿಂಹಸ್ವಾಮಿ ಅವರ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡುವ ಸಾಧ್ಯತೆ ಕೂಡಾ ಇದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications